ಬೆಂಗಳೂರು: ಐಎಂಎ ಬಹುಕೊಟಿ ಹಗರಣ ತನಿಖೆಯನ್ನು ಸಿಬಿಐಗೆ ವಹಿಸಿ ಇಲ್ಲವಾದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಮಲ್ಲೇಶ್ವರ ಶಾಸಕ ಬಿಜೆಪಿ ಮುಖಂಡ ಡಾ.ಅಶ್ವತ್ಥ ನಾರಾಯಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ವಿಚಾರದಲ್ಲಿ ಜನಸಾಮಾನ್ಯರು ಮತ್ತು ಸಮಾಜ ಸರ್ಕಾರದೆಡೆಗೆ ನೋಡುವಂತಾಗಿದೆ. ಸರ್ಕಾರ ಈ ಹಗಲುದರೋಡೆಗೆ ಸಹಕಾರ ನೀಡಿದ್ದು, ಅಮಾಯಕರ ದುಡ್ಡನ್ನು ಐಎಂಎ ದೋಚಲು ಪರೋಕ್ಷ ಕುಮ್ಮಕ್ಕು ನೀಡಿದಂತಾಗಿದೆ. ಈಗಾಗಲೇ ಬಿಜೆಪಿ ರಸ್ತೆಗಿಳಿದು ಹೋರಾಟ ಮಾಡಿ ಸರ್ಕಾರದ ಗಮನ ಸೆಳದಿದ್ದು, ಹೋರಾಟ ಕೂಡ ನಡೆಸಿದೆ ಎಂದರು.
ಈ ಹಿಂದೆಯೇ ಆರ್ಬಿಐ, ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಅಧಿಕಾರಿಗಳು ಇದು ಹೂಡಿಕೆ ಅಲ್ಲ ಷೇರ್ ಹೋಲ್ಡರ್ಗಳ ವ್ಯವಹಾರ ಅಂತಾ ತಪ್ಪು ಮಾಹಿತಿ ನೀಡಿದ್ರು. ಜೊತೆಗೆ ಸರ್ಕಾರ ಕೂಡ ಇದನ್ನ ನಿರ್ಲಕ್ಷ್ಯಿಸಿದೆ. ಷೇರ್ ಹೋಲ್ಡರ್ ಸ್ಕೀಮ್ ಅಲ್ಲ ಮಾಸಿಕ ಇನ್ವೆಸ್ಟ್ಮೆಂಟ್ ಸ್ಕೀಮ್ ಇದು. ಸಿಐಡಿ ಕ್ಲೀನ್ ಚೀಟ್ ಕೂಡ ನೀಡಿತ್ತು. ಸರ್ಕಾರ ಇದನ್ನು ಕೇವಲ ತೆರಿಗೆ ಇಲಾಖೆ, ಹಾಗೂ ಕಾನೂನು ಇಲಾಖೆಗೆ ಕಳುಹಿಸಿ ಕಾಲಹರಣ ಮಾಡಿತು ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ, ಮನ್ಸೂರ್ ವಿಡಿಯೋದಲ್ಲಿ ಹಲವರ ಹೆಸರು ಹೇಳಿದ್ದಾನೆ. ಈ ಹಿಂದೆ ಮಾಜಿ ಸಿಎಂ ಒಬ್ಬರು ಮನ್ಸೂರ್ ಅವರನ್ನ ಹೊಗಳಿರೋದು ನೋಡಿದ್ದೇವೆ. ಅವರು ಜೊತೆ ಊಟ ಕೂಡ ಮಾಡಿದ್ದಾರೆ ಎಂದರು.
ಸಾಕ್ಷಿ ನಾಶ ಮಾಡೋಕೆ ಎಸ್ಐಟಿ ರಚನೆ:
ಸಾಕ್ಷಿ ನಾಶ ಮಾಡಿ ಪ್ರಕರಣ ಮುಚ್ಚಿ ಹಾಕಲು ಎಸ್ಐಟಿ ತಂಡ ರಚನೆ ಮಾಡಲಾಗಿದೆ. ಇಡೀ ಸರ್ಕಾರ ಇದರಲ್ಲಿ ಶಾಮೀಲಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಿಐಡಿ ತನಿಖೆ ವೇಳೆ ಕೆಪಿಐಡಿ ಆಕ್ಟ್ ಇನ್ ವೂಕ್ ಆಗಲ್ಲ ಅಂದ್ರು. ಆದ್ರೆ, ಈಗ ಎಸ್ ಐಟಿಯಲ್ಲಿ ಕೆಪಿಐಡಿ ಆಕ್ಟ್ ಇನ್ ವೂಕ್ ಹೇಗೆ ಮಾಡಿದ್ರು?. ಸರ್ಕಾರ ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಮಾಡಕೊಂಡಿದೆ. ಆದರೆ, ಅವರ ರಕ್ಷಣೆ ಮಾಡುತ್ತಿಲ್ಲ. ಶಾರದಾ ಚಿಟ್ ಫಂಡ್ ಮಾದರಿಯಲ್ಲಿ ಇದು ಸಿಬಿಐ ತನಿಖೆಯಾಗಬೇಕು. ಶಾರದಾ ಚಿಟ್ ಫಂಡ್ ನಲ್ಲೂ ಹಲವು ಶಾಸಕರು ಹೆಸರುಗಳು ಕೇಳಿ ಬಂದಿದ್ದವು. ಕೊನೆಗೆ ಸುಪ್ರೀಂಕೋರ್ಟ್ ಮೂಲಕ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು.
ಅದೇ ಮಾದರಿಯಲ್ಲಿ ಕೂಡಲೇ ಐಎಂಎ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ಒಂದು ವೇಳೆ ನಮ್ಮ ಆಗ್ರಹ ಈಡೇರದಿದ್ದಲ್ಲಿ ನಾವು ನ್ಯಾಯಾಂಗ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ ಎಂದು ಕಿಡಿಕಾರಿದರು.