ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಹಗರಣದ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಜೂನ್ 30ರಂದು ಸಿಬಿಐ ಸಲ್ಲಿಸಿದ್ದ 5ನೇ ತನಿಖಾ ಪ್ರಗತಿ ವರದಿಯನ್ನು ಪೀಠ ಪರಿಶೀಲಿಸಿತು. ಈ ಮಧ್ಯೆ, ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಅವರು ಮಾಹಿತಿ ನೀಡಿ, ಕೊರೊನಾ ಹಾಗೂ ಲಾಕ್‍ಡೌನ್ ಕಾರಣಕ್ಕಾಗಿ ತನಿಖೆಯಲ್ಲಿ ಸ್ವಲ್ಪ ನಿಧಾನವಾಗಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ 5ನೇ ತನಿಖಾ ವರದಿ ಸಲ್ಲಿಸಿ ಈಗಾಗಲೇ 3 ತಿಂಗಳು ಕಳೆದಿದೆ. ಆದ್ದರಿಂದ ಅಕ್ಟೋಬರ್ 20ರೊಳಗೆ 6ನೇ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿತು.
ಅಲ್ಲದೇ, 2020ರ ಮಾ.5ರಂದು ನ್ಯಾಯಾಲಯ ನೀಡಿದ್ದ ಆದೇಶ ಪಾಲನೆ ಮಾಡಿದ್ದರ ಬಗ್ಗೆ ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು. ಹಾಗೆಯೇ, ಆರಂಭದಿಂದ ಅ.15ರವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿತು.
ಈ ವೇಳೆ, ಅರ್ಜಿದಾರರು ತಮ್ಮ ಕೋರಿಕೆಗಳನ್ನು ವಿವರಿಸಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಿಬಿಐ ತನಿಖಾ ಪ್ರಗತಿ ವರದಿ, ರಾಜ್ಯ ಸರ್ಕಾರದ ಸಮಗ್ರ ಅಫಿಡವಿಟ್ ಹಾಗೂ ಸಕ್ಷಮ ಪ್ರಾಧಿಕಾರದ ವರದಿ ಪರಿಶೀಲಿಸಿದ ಬಳಿಕ ಅರ್ಜಿದಾರರ ವಾದ ಆಲಿಸುವುದಾಗಿ ತಿಳಿಸಿ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು.