ಬೆಂಗಳೂರು: ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್. ರೋಷನ್ ಬೇಗ್ ಆಸ್ತಿ ಜಪ್ತಿಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಬೇಗ್ ಅವರ ಆಸ್ತಿ ವಿವರಗಳ ಕುರಿತು ಮಾಹಿತಿ ನೀಡುವಂತೆ ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರದಲ್ಲಿ ರೋಷನ್ ಬೇಗ್ ಅವರ ಆಸ್ತಿಯ ವಿವರಗಳಿವೆ. ಆಸ್ತಿ ಕುರಿತು ನಿಖರ ಮಾಹಿತಿಗಳು ಲಭ್ಯವಾದ ನಂತರ ಕೆಪಿಐಡಿ ಕಾಯ್ದೆಯಡಿ ಜಪ್ತಿಗೆ ಕ್ರಮ ಜರುಗಿಸಲಾಗುತ್ತದೆ. ಹಾಗೆಯೇ, ಆಸ್ತಿ ಪರಭಾರೆಗೂ ಮುನ್ನ ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಐಎಂಎ ಕಂಪನಿ ಸರ್ಕಾರಿ ಶಾಲೆಗೆ ನೀಡಿರುವ 10 ಕೋಟಿ ರೂಪಾಯಿ ದೇಣಿಗೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ಹೇಳಿಕೆ ಪರಿಗಣಿಸಿದ ಪೀಠ, ದೇಣಿಗೆ ನೀಡುವ ಕುರಿತು ಸರ್ಕಾರ ಮತ್ತು ಎಐಎಂ ಕಂಪನಿ ನಡುವೆ ಆಗಿರುವ ಒಪ್ಪಂದದ ಕಾನೂನಾತ್ಮಕ ಅಂಶಗಳನ್ನು ನ್ಯಾಯಾಲಯ ಪರಿಶೀಲನೆ ನಡೆಸಲಿದೆ. ಈ ಬಗ್ಗೆ ಅರ್ಜಿದಾರರ ಎಲ್ಲಾ ವಾದ ಆಲಿಸಲಾಗುವುದು ಎಂದು ಹೇಳಿತು. ಜತೆಗೆ, ಠೇವಣಿದಾರರ ಹಣವನ್ನು ದೇಣಿಗೆ ನೀಡಬಹುದೇ ಎಂಬ ಅಂಶದ ಕುರಿತು ವಾದ ಮಂಡಿಸಲು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪೀಠ, ಏಪ್ರಿಲ್ ತಿಂಗಳಲ್ಲೇ ರೋಷನ್ ಬೇಗ್ ಆಸ್ತಿ ಜಪ್ತಿಗೆ ಕ್ರಮ ಜರುಗಿಸುವಂತೆ ನ್ಯಾಯಾಲಯ ನಿರ್ದೇಶಿಸಿದ್ದರೂ ಕ್ರಮ ಕೈಗೊಂಡಿಲ್ಲವೇಕೆ. ಲಾಕ್ಡೌನ್ ನೆಪ ಬೇಡ. ಲಾಕ್ಡೌನ್ಗೂ ಆಸ್ತಿ ಜಪ್ತಿ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಆರೋಪಿಯು ತನ್ನ ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ? ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ಕಾರ್ಯವನ್ನು ವಿಳಂಬ ಮಾಡುತ್ತಿರುವ ಆರೋಪವಿದೆ. ಹೀಗಾಗಿ ರೋಷನ್ ಬೇಗ್ ಅವರ ಆಸ್ತಿ ಜಪ್ತಿ ವಿಚಾರವಾಗಿ ಎರಡು ವಾರಗಳಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ತಾಕೀತು ಮಾಡಿತ್ತು.
ಓದಿ: ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ