ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಸಿಬಿಐ ಇಂದು ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸಿದೆ. ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಅವರು, ಸಿಬಿಐನಿಂದ ಇಲ್ಲಿಯವರೆಗೆ ನಡೆಸಿದ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸಿದರು. ರಾಜಕಾರಣಿಗಳು, ಕೆಲ ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಡಿಸೆಂಬರ್ 18, 2019 ರಂದು ಸಿಆರ್ಪಿಸಿ (ಭ್ರಷ್ಟಾಚಾರ ತಡೆ ಕಾಯ್ದೆಯಡಿ) ಅನುಮತಿ ಕೋರಲಾಗಿದೆ ಎಂದರು.
ಇದೇ ವೇಳೆ ಅರ್ಜಿದಾರರ ಪರ ವಾದಿಸಿದ ವಕೀಲರು ಐಎಂಎ ವಂಚನೆ ಪ್ರಕರಣದ ತನಿಖಾ ತಂಡದ ಮುಖ್ಯಸ್ಥ ಎ.ವೈ.ವಿ. ಕಷ್ಣ ಬದಲಾವಣೆ ಮಾಡಿರುವ ಕುರಿತು ಅನುಮಾನ ಹೊರಹಾಕಿದರು. ಈ ವೇಳೆ ಸಿಬಿಐ ವಕೀಲ ಪ್ರಸನ್ನಕುಮಾರ್ ಅವರು, ಸಿಬಿಐನೊಂದಿಗಿನ ಸೇವಾವಧಿ 2020ರ ಜ.17ರಂದು ಎ.ವೈ.ವಿ. ಕಷ್ಣ ಅವಧಿ ಮುಗಿಯಲಿದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಈವರೆಗೆ ಸಿಬಿಐ ತಂಡದ ತನಿಖೆ ಸಮಾಧಾನಕರವಾಗಿದೆ. ಇಂಥ ಸಂದರ್ಭದಲ್ಲಿ ತಂಡದ ಮುಖ್ಯಸ್ಥರನ್ನ ಮುಂದುವರಿಸುವುದು ಸೂಕ್ತವಾಗಿದೆ. ಈ ಬಗ್ಗೆ ನಿರ್ಧರಿಸಿ ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಹೇಳಿ ವಿಚಾರಣೆ ಮುಂದೂಡಿದೆ.