ಬೆಂಗಳೂರು: ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಡಿ ಬಂಧಿತನಾಗಿದ್ದ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೂರು ವರ್ಷದ ಹಿಂದೆ ಮಾಡಿದ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಗೂಡ್ಸ್ ವಾಹನವೊಂದರಲ್ಲಿ 502 ಕೆ.ಜಿ. ರಕ್ತ ಚಂದನ ಮರದ ತುಂಡುಗಳನ್ನು ಆರ್.ಟಿ.ನಗರದಿಂದ ಅಕ್ರಮವಾಗಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸುಹೇಲ್ ಖಾನ್, ಅಬ್ದುಲ್ ಬಸೀರ್, ಅನೀಸಾ ಫಾತಿಮಾ ಎಂಬುವರನ್ನು ಬಂಧಿಸಿದ್ದರು. ಈ ಪೈಕಿ ಸುಹೇಲ್ ನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೂರು ವರ್ಷದ ಹಿಂದೆ ಕೊಲೆ ನಡೆಸಿರುವ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಕೆ.ಜಿ.ಹಳ್ಳಿ ನಿವಾಸಿಯಾದ ಸುಹೇಲ್, 2017 ರಲ್ಲಿ ನೂರ್ ಎಂಬುವನನ್ನು ಬೆಂಗಳೂರಿನಿಂದ ಕಾರಿನಲ್ಲಿ ಅಪಹರಿಸಿಕೊಂಡು ಗೌರಿಬಿದನೂರಿನ ಫಾರ್ಮ್ ಹೌಸ್ ಕರೆದುಕೊಂಡು ಹೋಗಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಇದೇ ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀನಿಂದ ಹೊರಬಂದಿದ್ದ ಸುಹೇಲ್ ಹಣದಾಸೆಗಾಗಿ ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ದಂಪತಿ ಅಬ್ದುಲ್ ಬಷೀರ್ ಹಾಗೂ ಅನೀಸಾ -ಫಾತಿಮಾ ಮನೆಯಲ್ಲಿ ಇರಿಸಲು ಮುಂದಾಗಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಮೂವರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.