ಬೆಂಗಳೂರು : ವ್ಯಕ್ತಿಯೊಬ್ಬರಿಗೆ ಅಕ್ರಮ ಸಂಬಂಧದಿಂದ ಜನಿಸಿದ ಮಗುವಿಗೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪರಿಹಾರ ಪಡೆಯಲು ಅರ್ಹ ಎಂದು ಹೈಕೋರ್ಟ್ ತಿಳಿಸಿದೆ.
ಬೆಂಗಳೂರು ಉತ್ತರದ ದೊಡ್ಡ ತೋಗೂರು ಗ್ರಾಮದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರ ಸೇರಿದಂತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ (ಮಹಿಳೆಗೆ ಅಕ್ರಮ ಸಂಬಂಧವಿದ್ದವರು) ಹಾಗೂ ಅವರ ಪೋಷಕರು ಪ್ರತ್ಯೇಕವಾಗ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಪ್ರಕರಣದಲ್ಲಿ ಒಟ್ಟು ಪರಿಹಾರದ ಮೊತ್ತವನ್ನು 13,28,940 ರೂ.ಗಳಿಗೆ ಹೆಚ್ಚಳ ಮಾಡಿದ್ದು, ಪ್ರಕರಣ ದಾಖಲಾದ ದಿನದಿಂದ ವಾರ್ಷಿಕವಾಗಿ ಶೇ. 6ರಷ್ಟು ಬಡ್ಡಿಯೊಂದಿಗೆ ಪರಿಹಾರ ನೀಡಬೇಕು. ಅಪ್ರಾಪ್ತ ಮಗುವಿಗೆ ಪರಿಹಾರದ ಮೊತ್ತದ ಪೈಕಿ ಶೇ. 4 ರಷ್ಟು ಹಣಕ್ಕೆ ಅರ್ಹತೆ ಹೊಂದಿದ್ದು, ಅವರ ತಂದೆ-ತಾಯಿ ತಲಾ ಶೇ. 30ರಷ್ಟು ಪರಿಹಾರದ ಮೊತ್ತಕ್ಕೆ ಅರ್ಹರಾಗಿದ್ದಾರೆ. ತಂದೆ-ತಾಯಿಗೆ 60 ವರ್ಷಗಳಾಗಿರುವುದರಿಂದ ಅವರ ಪಾಲಿನ ಪೂರ್ತಿ ಹಣವನ್ನು ನ್ಯಾಯ ಮಂಡಳಿ ಬಿಡುಗಡೆ ಮಾಡಬೇಕು. ಅಪ್ರಾಪ್ತ ಮಗುವಿಗೆ ಆತ ಪ್ರಾಪ್ತನಾಗುವವರೆಗೆ ಹಣವನ್ನು ನಿಶ್ಚಿತ ಠೇವಣಿ ರೂಪದಲ್ಲಿ ಇಡಬೇಕು ಎಂದು ಸೂಚನೆ ನೀಡಿದೆ.
ಜತೆಗೆ, ತಾಯಿಯು, ಮಗುವಿನ ಶೈಕ್ಷಣಿಕ ಮತ್ತು ಇತರೆ ವೆಚ್ಚ ಭರಿಸಲು ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿಯ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಡೆದುಕೊಳ್ಳಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ.. ದಂಪತಿಯು 1996ರಲ್ಲಿ ವಿವಾಹವಾಗಿದ್ದು, ಒಂದು ಹೆಣ್ಣು ಮಗು ಜನಿಸಿತ್ತು. 2006ರಲ್ಲಿ ಈ ಸಂಬಂಧದಲ್ಲಿ ಬಿರುಕು ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, 2010ರಲ್ಲಿ ವಿಚ್ಛೇದನವಾಗಿತ್ತು. ಇದಾದ ಬಳಿಕ ಆ ಮಹಿಳೆಗೆ ಬೇರೊಬ್ಬನ (ಸದ್ಯ ಮೃತಪಟ್ಟ ವ್ಯಕ್ತಿ) ಪರಿಚಯವಾಗಿದ್ದು, ಅಕ್ರಮ ಸಂಬಂಧಕ್ಕೆ ತಿರುಗಿತ್ತು. 2006ರ ಆಗಸ್ಟ್ 8ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಧ್ಯೆ, ಆ ಮಹಿಳೆಯೊಂದಿಗೆ ಸಂಬಂಧದಲ್ಲಿದ್ದ ವ್ಯಕ್ತಿ ಕಾರಿನಲ್ಲಿ ತೆರಳುತ್ತಿದ್ದಾಗ ಮ್ಯಾಕ್ಸಿ ಕ್ಯಾಬ್ ನಡುವೆ ಸಂಭವಿಸಿದ ಅಪಘಾತದಲ್ಲಿ 2012ರ ಆಗಸ್ಟ್ 23ರಂದು ಸಾವನ್ನಪ್ಪಿದ್ದನು. ಆ ಮಹಿಳೆ ಮತ್ತು ಅಪ್ರಾಪ್ತ ಮಗು ಸೇರಿದಂತೆ ಮೃತ ವ್ಯಕ್ತಿಯ ತಂದೆ-ತಾಯಿಯು ಪ್ರತ್ಯೇಕವಾಗಿ ಪರಿಹಾರ ಕೋರಿ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಪ್ರತಿವಾದಿ ಶ್ರೀರಾಮ್ ಇನ್ಶೂರೆನ್ಸ್ ಕಂಪೆನಿಯು ಮಹಿಳೆ ಮತ್ತು ಮೃತ ವ್ಯಕ್ತಿ ಇಬ್ಬರೂ ವಿವಾಹವಾಗಿಲ್ಲ. ಅಲ್ಲದೇ ಮಗು ಪಡೆದಿಲ್ಲ ಎಂದು ವಾದಿಸಿತ್ತು. ದಾಖಲೆಗಳನ್ನು ಪರಿಶೀಲಿಸಿದ್ದ ನ್ಯಾಯ ಮಂಡಳಿಯ ಮೃತ ವ್ಯಕ್ತಿಯ ತಂದೆ-ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ, ಮಹಿಳೆ ಮತ್ತು ಆಕೆಯ ಮಗು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.
ಇದನ್ನು ಪ್ರಶ್ನಿಸಿ ಆ ಮಹಿಳೆ ಮತ್ತು ಅಪ್ರಾಪ್ತ ಮಗು ಅಲ್ಲದೇ ಮೃತ ವ್ಯಕ್ತಿಯ ಪೋಷಕರು ಪರಿಹಾರ ಹೆಚ್ಚಳ ಮಾಡುವಂತೆ ಕೋರಿ ಹೈಕೋರ್ಟ್ನಲ್ಲಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಕ್ರಮ ಸಂಬಬಂಧದ ಮಗುವಿಗೂ ಪರಿಹಾರ ನೀಡಬೇಕು ಎಂದು ತಿಳಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ಇದನ್ನೂ ಓದಿ: ಶಿವಸೇನೆಯ ಸಂಜಯ್ ರಾವತ್ ಅವರದ್ದು ಬೇಜವಾಬ್ದಾರಿ ಹೇಳಿಕೆ: ಗೃಹ ಸಚಿವ ಆರಗ ಜ್ಞಾನೇಂದ್ರ