ಬೆಂಗಳೂರು : ಬಿಡಿಎ ಮ್ಯುಚ್ಯುವಲ್ ಫಂಡ್ ಹಣ ಹೂಡಿಕೆ ದೊಡ್ಡ ಸುದ್ದಿಗೆ ಗ್ರಾಸವಾಗಿದ್ದ ಹಗರಣ. ಅದರ ಜೊತೆಗೆ ಅನಧಿಕೃತವಾಗಿ ಬಿಡಿಎ ನಿಧಿ ಹಣವನ್ನು ಇತರೆ ಸರ್ಕಾರಿ ಸಂಸ್ಥೆಗಳ ಖಾತೆಗಳಿಗೆ ವರ್ಗಾವಣೆ ಮಾಡಿ ಅಧಿಕಾರಿಗಳು ಅಕ್ರಮ ಎಸಗಿದ್ದರು. ಇದೀಗ ಆ ಹಣ ವಾಪಾಸು ಮಾಡುವಂತೆ ಬಿಡಿಎ ಅನೇಕ ಬಾರಿ ಪತ್ರ ಬರೆದರೂ ಇದುವರೆಗೆ ಯಾವ ಸರ್ಕಾರಿ ಸಂಸ್ಥೆಗಳು ನಯಾ ಪೈಸೆ ಹಣವನ್ನು ಬಿಡಿಎಗೆ ಹಿಂತುರಿಗಿಸಿಲ್ಲ. ಹಾಗಾಗಿ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ನಿವೇಶನಗಳನ್ನು, ಫ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ ಬಿಡಿಎ ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತದೆ. ಆದರೆ, ಈಗಾಗಲೇ ಆದಾಯ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ಬಿಡಿಎಗೆ ತನ್ನ ಉದ್ಯೋಗಿಗಳ ವೇತನ ನೀಡಲೂ ಪರದಾಡುವಂತಾಗಿದೆ. ಸಾಲ ಮಾಡಿ, ಕಾರ್ನರ್ ನಿವೇಶನಗಳನ್ನು ಅಡ ಇಟ್ಟು ಬಿಡಿಎ ಹಣ ಹೊಂದಿಸುತ್ತಿದೆ. ನಿವೇಶನ ಖರೀದಿಗಾಗಿ ಸಾರ್ವಜನಿಕರು ಪಾವತಿಸಿದ ಹಣವನ್ನು ಬಿಡಿಎ ಅಕ್ರಮವಾಗಿ ಮ್ಯುಚ್ಯವಲ್ ಫಂಡ್ನಲ್ಲಿ ಹೂಡಿಕೆ ಮಾಡಿತ್ತು. 2014ರಲ್ಲಿ ಈ ಅಕ್ರಮ ಬೆಳಕಿಗೆ ಬಂದಿತ್ತು. ಅದರ ಜೊತೆಗೆ ಬಿಡಿಎ ತನ್ನ ನಿಧಿ ಹಣವನ್ನು ಬೆಂಗಳೂರು ಮೆಟ್ರೋ, ಕಾಫಿ ಬೋರ್ಡ್ ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಂಸ್ಟ್ರಕ್ಷನ್ ಸೊಸೈಟಿ ಖಾತೆಗೆ ವರ್ಗಾಯಿಲಾಗಿತ್ತು. ಇದೇ ಹಣ ವಾಪಾಸು ಮಾಡುವಂತೆ ಪತ್ರ ಬರೆಯಲಾಗುತ್ತಿದೆ.
ಏನಿದು ಬಿಡಿಎ ನಿಧಿ ವರ್ಗಾವಣೆ ಅಕ್ರಮ:
ಬಿಡಿಎ ತನ್ನ ನಿಧಿ ಹಣವನ್ನು ಅಕ್ರಮವಾಗಿ ಸರ್ಕಾರಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಿತ್ತು. ಸಿಎಜಿ ಪರಿಶೀಲನೆ ವೇಳೆ ಮ್ಯುಚ್ಯುವಲ್ ಫಂಡ್ ಅಕ್ರಮದ ಜೊತೆಗೆ ಈ ಅಕ್ರಮ ವರ್ಗಾವಣೆಯೂ ಬೆಳಕಿಗೆ ಬಂದಿತ್ತು. ಬಿಡಿಎ ತನ್ನ ನಿಧಿ ಹಣವನ್ನು 25-11-2002ರಂದು ಕಾಫಿ ಬೋರ್ಡ್ಗೆ 1.04 ಕೋಟಿ ರೂ.ವನ್ನು ಅನಧಿಕೃತವಾಗಿ ವರ್ಗಾಯಿಸಿತ್ತು. ಜೂನ್ ತಿಂಗಳ 2006ರಲ್ಲಿ ಬಿಡಿಎ ನಿಧಿ ಹಣವನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಂಸ್ಟ್ರಕ್ಷನ್ ಸೊಸೈಟಿ ಖಾತೆಗೆ 2.13 ಕೋಟಿ ರೂ. ವರ್ಗಾಯಿಸಿತ್ತು. ಅದೇ ರೀತಿ ಜೂನ್ 2007ರಂದು ನಮ್ಮ ಮೆಟ್ರೋಗೆ 3 ಕೋಟಿ ರೂ. ವರ್ಗಾವಣೆ ಮಾಡಿತ್ತು. ಈ ವ್ಯವಹಾರದ ಬಗ್ಗೆ ಎಲ್ಲೂ ದಾಖಲೆಗಳೂ ಇಲ್ಲ. ಯಾವ ಉದ್ದೇಶಕ್ಕೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಆದರೆ, ಈ ಸಂಸ್ಥೆಗಳ ಮೂಲಕ ಮ್ಯುಚ್ಯವಲ್ ಫಂಡ್ನಲ್ಲಿ ಹೂಡಿಕೆ ಮಾಡಲು ಬಿಡಿಎ ನಿಧಿ ಹಣವನ್ನು ವರ್ಗಾಯಿಸಲಾಗಿತ್ತು. 2014ರಲ್ಲಿ ಸಿಎಜಿ ತನಿಖೆ ವೇಳೆ ಬಿಡಿಎಯ ಈ ಅಕ್ರಮ ಹೊರ ಬಂದಿತ್ತು.
ನಯಾ ಪೈಸೆ ಹಣ ಹಿಂತಿರುಗಿಸದ ಸಂಸ್ಥೆಗಳು:
ಅಕ್ರಮವಾಗಿ ಬಿಡಿಎ ಹಣವನ್ನು ಈ ಮೂರು ಸರ್ಕಾರಿ ಸಂಸ್ಥೆಗಳಿಗೆ ವರ್ಗಾಯಿಸಲಾಗಿತ್ತು. ಬಳಿಕ ಈ ಹಣವನ್ನು ಬಡ್ಡಿ ಸಮೇತ ವಾಪಸು ಬಿಡಿಎಗೆ ಹಿಂತಿರುಗಿಸುವಂತೆ 2015ರಿಂದ ಪತ್ರ ಬರೆಯಲಾಗುತ್ತಿದೆ. ಅದರಂತೆ ಬಡ್ಡಿ ಸಮೇತವಾಗಿ ಕಾಫಿ ಬೋರ್ಡ್ 1.68 ಕೋಟಿ ರೂ., ಬಿಸಿಎಂ ಬಿಲ್ಡಿಂಗ್ ಕಂಸ್ಟ್ರಕ್ಷನ್ ಸೊಸೈಟಿ 2.54 ಕೋಟಿ ರೂ. ಮತ್ತು ನಮ್ಮ ಮೆಟ್ರೋ 3.07 ಕೋಟಿ ರೂ. ನಂತೆ ಒಟ್ಟು 7.29 ಕೋಟಿ ರೂ. ಬಿಡಿಎಗೆ ಹಿಂತಿರುಗಿಸಬೇಕಾಗಿದೆ. ಈ ಸಂಬಂಧ ಬಿಡಿಎ ಹಣ ಹಿಂತಿರುಗಿಸುವಂತೆ 2015 ರಿಂದ ಈ ಮೂರು ಸಂಸ್ಥೆಗಳಿಗೆ ಪತ್ರ ಬರೆಯುತ್ತಿದೆ. ಆದರೆ, ಇದುವರೆಗೆ ಮೂರು ಸಂಸ್ಥೆಗಳು ನಯಾ ಪೈಸೆ ಹಣವನ್ನು ಬಿಡಿಎಗೆ ಹಿಂತಿರುಗಿಸಿಲ್ಲ ಎಂದು ಬಿಡಿಎ ಹಣಕಾಸು ಸದಸ್ಯರೊಬ್ಬರು ತಿಳಿಸಿದ್ದಾರೆ. ಮೂರು ಸಂಸ್ಥೆಗಳಿಗೆ ಹಣ ಹಿಂತಿರುಗಿಸುವಂತೆ ಪತ್ರಗಳನ್ನು ಬರೆಯುತ್ತಿದ್ದೇವೆ. ಆದರೆ, ಪ್ರಕರಣ ಕೋರ್ಟ್ನಲ್ಲಿದೆ ಎಂಬ ಕಾರಣ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಬಿಡಿಎ ತನ್ನ ಕಾರ್ನರ್ ಸೈಟ್ಗಳನ್ನು ಹರಾಜು ಹಾಕುತ್ತಿದೆ. ಆದರೆ, ಬಿಡಿಎಗೆ ತನ್ನ ಹಣವನ್ನೇ ವಾಪಸು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಸಂಸ್ಥೆಗಳಿಗೆ ವರ್ಗಾಯಿಸಲಾದ ತನ್ನ ಹಣವನ್ನು ವಾಪಸು ಪಡೆಯವಲ್ಲಿ ಬಿಡಿಎ ಗಾಂಭಿರ್ಯತೆ ತೋರುತ್ತಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಶಿವಕುಮಾರ್ ಆರೋಪಿಸಿದ್ದಾರೆ.