ಹೊಸಕೋಟೆ: ಕೋವಿಡ್ ಲಸಿಕೆಗಳನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಹೊಸಕೋಟೆ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ಮತ್ತು ತಹಶೀಲ್ದಾರ್ ಗೀತಾ ಅವರೊಂದಿಗೆ ಎಂವಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಪರಿಶೀಲನೆ ಮಾಡಲು ಬಂದಿದ್ದ ಸಮಯದಲ್ಲಿ ಆಸ್ಪತ್ರೆಯ ನಿರ್ವಹಣಾಧಿಕಾರಿ ರೆಮಿಡಿಸಿವರ್ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ರೆಮಿಡಿಸಿವರ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಇಲ್ಲ. ಎಲ್ಲಾ ಆಸ್ಪತ್ರೆಗಳಿಗೆ ಸಮರ್ಪಕವಾಗಿ ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಹೇಳಿದರು. ನಂತರ ಎಂ.ವಿ.ಜೆ ಆಸ್ಪತ್ರೆಯ ಹೊರಗುತ್ತಿಗೆ ಫಾರ್ಮಸಿ ಮೇಲೆ ದಿಢೀರ್ ದಾಳಿ ಮಾಡಿದಾಗ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ರೆಮಿಡಿಸಿವರ್ ಲಸಿಕೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ.
ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಎಂಬಾತ ಎಂ.ವಿ.ಜೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಕೋವಿಡ್ ಸೋಂಕಿತರ ಹೆಸರಲ್ಲಿ ರೆಮಿಡಿಸಿವರ್ ಲಸಿಕೆ ತರಿಸಿಕೊಂಡು, ಇತರೆ ಆಸ್ಪತ್ರೆಗಳಿಗೆ ಹಾಗೂ ವೈದ್ಯರು ಸೂಚನೆ ಇರುವ ಚೀಟಿಯುಳ್ಳವರಿಗೆ ಮಾರಾಟ ಮಾಡುತ್ತಿರುವುದು ದಾಳಿ ವೇಳೆ ತಿಳಿದು ಬಂದಿದೆ. ಆಸ್ಪತ್ರೆ ಆಡಳಿತ ಮಂಡಳಿಯ ಕಣ್ಣು ತಪ್ಪಿಸಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಹೆಸರಿನ ಮೇಲೆ ಸರ್ಕಾರಕ್ಕೆ ಲೆಕ್ಕ ತೋರಿಸಿ ಖಾಸಗಿ ಆಸ್ಪತ್ರೆ ರೋಗಿಗಳಿಗೆ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಹೊಸಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ರೆಮಿಡಿಸಿವರ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಯ ರೋಗಿಗಳಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿ ದಾಳಿ ವೇಳೆ ಸಿಕ್ಕಿ ಬಿದ್ದ ಘಟನೆ ಇದಾಗಿದೆ.
ಇದನ್ನೂ ಓದಿ: ರೆಮ್ಡಿಸಿವಿರ್ ಲಸಿಕೆಗಾಗಿ ಕೀಳು ಮಟ್ಟಕ್ಕಿಳಿದ ರಾಜಕಾರಣಿಗಳು.. ಗುಜರಾತ್, ಮಹಾರಾಷ್ಟ್ರದಲ್ಲಿ ನಡುರಾತ್ರಿ ಹೈಡ್ರಾಮಾ!