ಬೆಂಗಳೂರು: ರಾಜ್ಯದ ವಿವಿಧೆಡೆ ನಿಯಮ ಉಲ್ಲಂಘಿಸಿ 350ಕ್ಕೂ ಹೆಚ್ಚು ಕಂದಾಯ ನಿವೇಶನಗಳ ದಾಖಲೆ ತಿರುಚಿದ ಪ್ರಕರಣ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿದೆ. ಹೀಗಾಗಿ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ರಾಜ್ಯದ ಕಂದಾಯ ನಿವೇಶನ ನೋಂದಣಿ ಮತ್ತು ಮುದ್ರಾಂಕದ ಕಾವೇರಿ ವೆಬ್ಸೈಟ್ನಲ್ಲಿ ಗೋಲ್ಮಾಲ್ ಆಗಿರುವ ವಿಚಾರ ಇಲಾಖೆಯ ಆಯುಕ್ತ ತ್ರೀಲೋಕ್ ಚಂದ್ರ ಗಮನಕ್ಕೆ ಬಂದಿತ್ತು. ಇತ್ತೀಚೆಗೆ ಬಿಟಿಎಂ ಲೇಔಟ್ನಲ್ಲಿ ನಿವೇಶನವೊಂದರ ನೋಂದಣಿಗೆ ಸಂಬಧಿಸಿದಂತೆ ದೂರೊಂದನ್ನು ಪರಿಶೀಲಿಸಿದಾಗ ಅನಧಿಕೃತ ಬಡಾವಣೆಯಲ್ಲಿ ಸೇಲ್ ಅಗ್ರಿಮೆಂಟ್ ಆಧಾರದ ಮೇಲೆ ಮುದ್ರಾಂಕ ಮತ್ತು ನೋಂದಣಿಯ ಕಾವೇರಿ ವೆಬ್ಸೈಟ್ ಮೂಲಕ ರೆವಿನ್ಯೂ ಸೈಟ್ಗಳನ್ನು ರಿಜಿಸ್ಟರ್ ಮಾಡಿ, ಕೇವಲ ಹತ್ತೇ ದಿನಗಳಲ್ಲಿ ಸರ್ಕಾರಕ್ಕೆ ನೂರಾರು ಕೋಟಿ ವಂಚನೆ ಮಾಡಿರುವ ವಿಚಾರ ತಿಳಿದುಬಂದಿತ್ತು. ಹೀಗಾಗಿ ಆಯುಕ್ತ ತ್ರೀಲೋಕ್ ಚಂದ್ರ, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪ್ರಕರಣವನ್ನು ಸೈಬರ್ ವಿಭಾಗದಿಂದ ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಸಿಸಿಬಿ, ಹನ್ನೊಂದು ಸಬ್ ರಿಜಿಸ್ಟ್ರರ್ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಸಂಬಧಪಟ್ಟ ಅಧಿಕಾರಿಗಳು ಮೊಬೈಲ್ ಸ್ವೀಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದು, ಅಜ್ಞಾತ ಸ್ಥಳದಿಂದಲೇ ಬೇಲ್ಗೆ ಅರ್ಜಿ ಹಾಕಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಸದ್ಯ ಸಿಸಿಬಿ ಪೊಲೀಸರು ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.