ಬೆಂಗಳೂರು: ಸರ್ಕಾರಿ ಭೂಮಿ ಅತಿಕ್ರಮಣ ಮತ್ತು ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಚಿತ್ರಾ ಪೂರ್ಣಿಮಾ ಎಂಬುವರು ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳಡಿಯಲ್ಲಿ ಜಾರಿ ನಿರ್ದೇಶನಾಲಯ 62.5 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ಇಂದಿರಾ ನಗರದಲ್ಲಿ ಒಂದು ಸ್ಥಿರಾಸ್ತಿ ಮತ್ತು ಆರೋಪಿಗಳ ಹೆಸರಿನಲ್ಲಿ 2.63 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿಯನ್ನೂ ವಶಕ್ಕೆ ಪಡೆಯಲಾಗಿದೆ. 2002ರಲ್ಲಿ ಚಿತ್ರಾ ಪೂರ್ಣಿಮಾ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಬೇನಾಮಿ ಆಸ್ತಿ ದೂರಿನ ತನಿಖೆಯನ್ನು ನಡೆಸಿದ ಇಡಿ ಈ ಕ್ರಮವನ್ನು ಕೈಗೊಂಡಿದೆ.
ದಿವಂಗತ ಜಾರ್ಜ್ ತಂಗಯ್ಯ ಎಂಬುವರು ಇಂದಿರಾ ನಗರದಲ್ಲಿ ವಾಣಿಜ್ಯ ಸಂಕೀರ್ಣದ ಅಭಿವೃದ್ಧಿಗಾಗಿ ನಿತೇಶ್ ಇಂದಿರಾನಗರ ರೀಟೇಲ್ ಪ್ರೈ. ಲಿ. ಜೊತೆಗೆ ಜಂಟಿ ಅಭಿವೃದ್ಧಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆಂಬುದು ಇಡಿ ತನಿಖೆಯಿಂದ ಗೊತ್ತಾಗಿದೆ.
ಹೀಗಾಗಿ ಅವರು ಡೆವಲಪರ್‌ನಿಂದ 105.50 ಕೋಟಿ ರೂ. ಪಡೆದರು. ತಂಗಯ್ಯ ಅವರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನಿನ (ಜಲಪ್ರದೇಶ ಮತ್ತು ಸಾರ್ವಜನಿಕ ರಸ್ತೆ) ಒಂದು ಭಾಗವು ಜಮೀನು ಸೇರಿದ್ದು, ಅದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಆರೋಪಿಗಳು ಮೋಸದಿಂದ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆಂದು ದೂರು ನೀಡಲಾಗಿದ್ದು, ಡೆವಲಪರ್‌ನಿಂದ ಪಡೆದ 105.50 ಕೋಟಿ ರೂ.ಗಳಲ್ಲಿ 62.05 ಕೋಟಿ ರೂ.ಗಳನ್ನು ಡೆವಲಪರ್‌ಗೆ ಈವರೆಗೂ ಮರುಪಾವತಿ ಮಾಡಿಲ್ಲವೆಂದು ತಿಳಿದುಬಂದಿದೆ. ಇದೀಗ ಪ್ರಕರಣ ಸಂಬಂಧ ಎಲ್ಲಾ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಾಟ: ತನಿಖೆ ಪ್ರಾರಂಭ