ಬೆಂಗಳೂರು : ಕಬ್ಬಿಣದ ಅದಿರಿನ ಅಕ್ರಮ ವ್ಯಾಪಾರ ಕುರಿತಂತೆ ಯುವಜನ ಸಬಲೀಕರಣ ಮತ್ತ ಕ್ರೀಡಾ ಇಲಾಖೆ ಸಚಿವ ಬಿ. ನಾಗೇಂದ್ರ ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು ದಾಖಲಿಸಿರುವ 16 ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳ ಕುರಿತ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ಜುಲೈ 14ರವರೆಗೆ ಮುಂದೂಡಿ ಹೈಕೋರ್ಟ್ ಆದೇಶ ಮಾಡಿದೆ.
ತಮ್ಮ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ (42ನೇ ಎಸಿಸಿಎಂಎಂ) ಮತ್ತು ಸೆಷನ್ಸ್ ನ್ಯಾಯಾಲಯದ (82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ) ವಿಚಾರಣೆ ರದ್ದುಪಡಿಸುವಂತೆ ಕೋರಿ ಸಚಿವ ನಾಗೇಂದ್ರ ಅವರು ಸಲ್ಲಿಸಿರುವ ಪ್ರತ್ಯೇಕ 16 ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಸಚಿವ ನಾಗೇಂದ್ರ ಪರ ಹಿರಿಯ ವಕೀಲರು ವಾದ ಮಂಡಿಸಿ, 2009ರಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಕ್ಕೆ 2023ರಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಖಲಾಗಿಸಿರುವ 16 ಪ್ರಕರಣಗಳಲ್ಲಿ ಕೆಲವೊಂದು ಪ್ರಕರಣಗಳು ಮ್ಯಾಜಿಸ್ಟ್ರೇಟ್ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರಲಿವೆ. ಮತ್ತೊಂದಷ್ಟು ಪ್ರಕರಣಗಳು ಸೆಷನ್ಸ್ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರಲಿವೆ. ಆದರೆ, ಮ್ಯಾಜಿಸ್ಟೇಟ್ ಕೋರ್ಟ್ ವ್ಯಾಪ್ತಿಗೆ ಬರುವ ಪ್ರಕರಣಗಳನ್ನೂ ಸೆಷನ್ಸ್ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದೆ. ಮತ್ತೊಂದೆಡೆ ತನ್ನ ವ್ಯಾಪ್ತಿಗೆ ಬರದಿದ್ದರೂ ಕೆಲ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್ ವಿಶೇಷ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿ, ಕ್ರಿಮಿನಲ್ ಕೇಸ್ ದಾಖಲಿಸಲು ಲೋಕಾಯುಕ್ತ ಎಸ್‌ಐಟಿಗೆ ಆದೇಶಿಸಿದೆ. ಇದು ಕಾನೂನು ಬಾಹಿರವಾದ ಕ್ರಮವಾಗಿದೆ. ಅಲ್ಲದೆ, ಈ ಪ್ರಕ್ರಿಯೆ ಸುಪ್ರೀಂಕೋರ್ಟ್‌ನ ಹಲವು ಪ್ರಕರಣಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಲೋಕಾಯುಕ್ತ ಎಸ್‌ಐಟಿ ಪರ ವಕೀಲ ಬಿ.ಎಸ್. ಪ್ರಸಾದ್, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿರುವ ಸಂಬಂಧ ಈಗಷ್ಟೇ ಮಾಹಿತಿ ಲಭ್ಯವಾಗಿದ್ದು, ದಾಖಲೆಗಳು ಪರಿಶೀಲಿಸಲಾಗುತ್ತಿದೆ. ಆದ್ದರಿಂದ ಅರ್ಜಿಗೆ ಪ್ರತಿಕ್ರಿಯೆ ನೀಡಿ ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಕೋರಿದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಮ್ಯಾಜಿಸ್ಟ್ರೇಟ್ ಹಾಗೂ ಸೆಷನ್ಸ್ ನ್ಯಾಯಾಲಯಗಳ ವಿಚಾರಣೆಯನ್ನು ಜುಲೈ 14ರವರೆಗೆ ಮುಂದೂಡಿ ಆದೇಶಿಸಿತು.
ಅಕ್ರಮ ಅದಿರು ವ್ಯಾಪಾರ ಸೇರಿದಂತೆ ಇತರೆ ಆರೋಪಗಳ ಸಂಬಂಧ ಗಣಿ-ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ (ಎಂಎಂಡಿಆರ್) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸಚಿವ ನಾಗೇಂದ್ರ ವಿರುದ್ಧ ಲೋಕಾಯುಕ್ತ ಎಸ್‌ಐಟಿ 16 ಪ್ರಕರಣಗಳನ್ನು ದಾಖಲಿಸಿದೆ. ಅವು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಿರುವ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆ ವಿಚಾರಣೆ ರದ್ದು ಕೋರಿ ಸಚಿವ ನಾಗೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಪ್ರಕರಣ ಇತ್ಯರ್ಥವಾಗುವವರೆಗೂ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಆದೇಶಿಸಿದ ಸಿಬಿಐ ವಿಶೇಷ ಕೋರ್ಟ್