ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತದ ಬಳಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವ ಸಂಬಂಧ ಒಂದು ತಿಂಗಳೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಿರಿಮನೆ ಜಲಪಾತದ ಬಳಿ ಅರಣ್ಯ ಭೂಮಿ ಒತ್ತುವರಿ ತೆರವು ಕೋರಿ ಸ್ಥಳೀಯ ನಿವಾಸಿ ರಾಮಚಂದ್ರ ರಾವ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಅರ್ಜಿದಾರರು ಆರೋಪಿಸಿರುವಂತೆ ಕೆಲವೆಡೆ ಒತ್ತುವರಿಯಾಗಿದೆ. ಇನ್ನು ಕೆಲ ಕಟ್ಟಡಗಳನ್ನು ಸಕ್ರಮಗೊಳಿಸುವ ಕೆಲಸವೂ ಆಗುತ್ತಿದೆ. ಹೀಗಾಗಿ ವರದಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 2020ರ ಜನವರಿ 22ರಂದು ಒತ್ತುವರಿ ತೆರವು ಮಾಡುವ ಸಂಬಂಧ ಕೈಗೊಳ್ಳುವ ಕ್ರಮಗಳ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿತ್ತು. ಇದೇ ವಿಚಾರವಾಗಿ ಫೆ.23ರಂದು ನಡೆದ ವಿಚಾರಣೆ ವೇಳೆ ಮತ್ತೆ ಮೂರು ವಾರ ಕಾಲಾವಕಾಶ ನೀಡಲಾಗಿತ್ತು. ಆದರೂ, ಸರ್ಕಾರ ಈವರೆಗೆ ಪ್ರಮಾಣಪತ್ರ ಸಲ್ಲಿಸಿಲ್ಲ. ಹೀಗಾಗಿ, ಕೊನೆಯ ಅವಕಾಶ ನೀಡುತ್ತಿದ್ದು, ಮುಂದಿನ ಒಂದು ತಿಂಗಳೊಳಗೆ ಸರ್ಕಾರ ಈ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ :
ಶೃಂಗೇರಿ ತಾಲೂಕಿನ ಎರಡದಹಳ್ಳಿ ಗ್ರಾಮದ ಸರ್ವೇ ನಂ.173 ಮತ್ತು 199ರಲ್ಲಿನ ಜಾಗ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಸಮೀಪದಲ್ಲಿ ಸಿರಿಮನೆ ಜಲಪಾತವಿದ್ದು, ಕೆಲ ಪ್ರಭಾವಿಗಳು ಅಭಿವೃದ್ಧಿ ನೆಪದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.
ಈ ಬಗ್ಗೆ ದೂರು ನೀಡಿದ್ದರೂ ಸರ್ಕಾರಿ ಆಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಲಪಾತದ ಬಳಿ ಅನಧಿಕೃತ ಕಟ್ಟಡ ನಿರ್ಮಾಣ ನಿಲ್ಲಿಸಲು ಮತ್ತು ಜಲಪಾತದ ಸುತ್ತಲಿನ ಪ್ರದೇಶ ಸಂರಕ್ಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.