ಬೆಂಗಳೂರು: ಪದವಿ ಪಡೆದು ಹೊರ ಹೋಗುತ್ತಿರುವ ಪ್ರತಿಯೊಬ್ಬ ವಿಜ್ಞಾನವನ್ನು ಮಾನವನ ಒಳಿತಿಗೆ ಬಳಸಬೇಕು. ಈ ನಿರೀಕ್ಷೆ ಹೊಂದಿರುವುದಾಗಿ ಒಡಿಶಾ ಕೌಶಲ್ಯ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸುಬ್ರತೋ ಬಗ್ಚಿ ತಿಳಿಸಿದ್ದಾರೆ.
ಜೆ. ಎನ್ ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) 2021-22 ನೇಯ ಸಾಲಿನ ಘಟಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಐಐಎಸ್‌ಸಿ ಸೇರಿದಂತೆ ವಿಶ್ವದ ಉನ್ನತ ಶಿಕ್ಷಣ ಸಂಸ್ಥೆಗಳಾದ ಸ್ಟ್ಯಾನ್‌ಫೋರ್ಡ್, ಯೇಲ್, ಹಾರ್ವಡ್ ಮತ್ತು ಪ್ರಿನ್ಸ್‌ಟನ್ ಇಷ್ಟೊಂದು ಸಾಧನೆ ಮಾಡಲು ದಾನಿಗಳ ಉದಾತ್ತ ನೆರವು ಕಾರಣ. ನಾನು ಬಾಲ್ಯದಿಂದಲೂ ದಾನ ಮಾಡುವ ಗುಣ ಬೆಳೆಸಿಕೊಂಡಿದ್ದೆ. ದಾನ ಮಾಡಲು ಮನುಷ್ಯ ಹಿಂಜರಿಯಬಾರದು ಎಂದರು.
ಜ್ಞಾನಾಧಾರಿತ ಸಮಾಜ ನಿರ್ಮಾಣ ಆಗಬೇಕು: ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ಜ್ಞಾನಾಧಾರಿತ ಸಮಾಜದ ನಿರ್ಮಾಣವಾಗಬೇಕು. ಇಂತಹ ಸಮಾಜ ನಿರ್ಮಾಣದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ)ಯಂತಹ ಸಂಸ್ಥೆಗಳ ಪಾತ್ರ ದೊಡ್ಡದಿದೆ ಎಂದು ಐಐಎಸ್‌ಸಿ ಪರಿಷತ್‌ನ ಅಧ್ಯಕ್ಷ, ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಹೇಳಿದರು.
ನಮ್ಮದೇ ಚಿಂತನೆ, ಉತ್ಪನ್ನ, ಬೌದ್ಧಿಕ ಆಸ್ತಿ, ಉದ್ದಿಮೆಶೀಲತೆ ಬೆಳೆಯಬೇಕು. ಈ ಪ್ರಕ್ರಿಯೆಯಲ್ಲಿ ಐಐಎಸ್‌ಸಿಯ ಕೊಡುಗೆ ಮುಖ್ಯವಾಗಿರಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸೃಷ್ಟಿಯಾಗುವ ಜ್ಞಾನ ಉದ್ದಿಮೆಗಳನ್ನು ತಲುಪಿ ಬಳಿಕ ಮಾರುಕಟ್ಟೆಗೆ ಬಂದು ಜನರ ಜೀವನವನ್ನು ತಲುಪಬೇಕು ಎಂದರು.
ಜೀವನ ಮಟ್ಟ ಉತ್ತಮಗೊಳ್ಳುತ್ತ ಸಾಗುತ್ತದೆ: ನಾವು ನಮ್ಮೊಂದಿಗೆ ಸ್ಪರ್ಧೆಗೆ ಬೀಳಬೇಕು. ನಿನ್ನೆಯಿಂದ ಇಂದು ಉತ್ತಮವಾಗಿರಬೇಕು ಎಂಬ ಸಂಕಲ್ಪ ನಮ್ಮಲ್ಲಿರಲಿ. ಸಮಾಜ, ಸಂಸ್ಥೆ ಮತ್ತು ವೈಯಕ್ತಿಕ ಮಟ್ಟದಲ್ಲಿ ನಾವು ಇದೇ ಧೋರಣೆಯೊಂದಿಗೆ ಸಾಗಿದಾಗ ನಮ್ಮ ಜೀವನ ಮಟ್ಟ ಉತ್ತಮಗೊಳ್ಳುತ್ತ ಸಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೊಸ ಆತ್ಮವಿಶ್ವಾಸ ಮೂಡಿಸಿದೆ: ಕೋವಿಡ್ ವಿದ್ಯಾರ್ಥಿಗಳ ಮುಂದೆ ಸವಾಲುಗಳನ್ನು ಒಡ್ಡಿತ್ತು. ಆದರೆ, ಆ ಸವಾಲುಗಳನ್ನು ಡಿಜಿಟಲೀಕರಣಕ್ಕೆ ತೆರೆದುಕೊಳ್ಳುವ ಮೂಲಕ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಹಿಮ್ಮೆಟ್ಟಿಸಿದ್ದೀರಿ. ಇದು ನಿಮ್ಮಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ ಎಂದು ಕ್ರಿಸ್ ಗೋಪಾಲಕೃಷ್ಣನ್ ತಿಳಿಸಿದರು.
ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪದಕ: ಸಮಾರಂಭದಲ್ಲಿ 64 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪದಕಗಳನ್ನು ನೀಡಲಾಯಿತು. 2021-22ರ ಸಾಲಿನಲ್ಲಿ 246 ಪಿಹೆಚ್‌ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು 98 ಪದವಿ ವಿದ್ಯಾರ್ಥಿಗಳು ಪದವಿ ಪಡೆದರು.
ಪಾಚಿಯಿಂದ ಪವರ್ ಸಂಶೋಧನೆಗೆ ಪಿಹೆಚ್‌ಡಿ: ಪಾಚಿಯಿಂದ ಇಂಧನ ತಯಾರಿಸುವ ಬಗ್ಗೆ ನಾನು ಪಿಹೆಚ್‌ಡಿ ಪ್ರಬಂಧ ಮಂಡಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಅಮೂಲ್ಯ ಮತ್ತು ವಿಮಲ ರೆಡ್ಡಿ ಪದಕಕ್ಕೆ ಭಾಜನನಾಗಿದ್ದೇನೆ. ಉತ್ತರ ಕನ್ನಡದ ಕುಮಟಾ ಭಾಗದಲ್ಲಿ ಸಂಶೋಧನೆ ನಡೆಸಿದ್ದು, ಉಪ್ಪು ನೀರಿನಲ್ಲಿ ಬೆಳೆಯುವ ಎರಡು ಪ್ರಕಾರದ ಪಾಚಿಗಳಿಂದ ಇಂಧನ ತಯಾರಿಸಬಹುದು ಎಂಬುದನ್ನು ಕಂಡುಕೊಂಡಿದ್ದೇನೆ ಎಂದು ಪಿ.ಹೆಚ್.ಡಿ ಪದವಿ ಪಡೆದ ದೀಪ್ತಿ ಹೆಬ್ಬಾಲೆ ಈಟಿವಿ ಭಾರತಕ್ಕೆ ತಿಳಿಸಿದರು.
ಇನ್ನಷ್ಟು ಸಂಶೋಧನೆ ಅಗತ್ಯವಿದೆ: ಕಬ್ಬು, ಆಹಾರ ಧಾನ್ಯಗಳ ತ್ಯಾಜ್ಯಗಳಂತೆ ಪಾಚಿಗಳಿಂದ ಎಥೆನಾಲ್ ತಯಾರಿಸಿ ಅದನ್ನು ಪೆಟ್ರೋಲಿಯಂ ಜೊತೆಗೆ ಮಿಶ್ರಣ ಮಾಡಿ ಬಳಸಬಹುದು ಎಂಬುದು ನನ್ನ ಸಂಶೋಧನೆಯ ತಿರುಳು. ಪಾಚಿ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಕರ್ನಾಟಕದಲ್ಲಿ 200 ಕಿ ಮೀ ಉದ್ದದ ಕರಾವಳಿ ಇರುವುದರಿಂದ ಪಾಚಿ ಕೃಷಿಗೆ ಹೆಚ್ಚಿನ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಓದಿ: ನಮ್ಮದು ಡಬಲ್ ಇಂಜಿನ್ ಸರ್ಕಾರ, ಕಾಂಗ್ರೆಸ್ ಡಬಲ್ ಸ್ಟೇರಿಂಗ್ ಪಕ್ಷ: ಸಚಿವ ಸುಧಾಕರ್