ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳ ಪ್ರಶಸ್ತಿ (Alumni Awards) ಪ್ರಕಟಿಸಲಾಗಿದೆ. 2022ನೇ ಸಾಲಿನ ಪ್ರಶಸ್ತಿಗಳಿಗೆ ಪ್ರೊ.ಭರತ್ ಕುಮಾರ್ ಭಾರ್ಗವ, ನಿವೃತ್ತ ಕರ್ನಲ್ ಹೆಚ್‌ಎಸ್ ಶಂಕರ್, ಡಾ.ಕೃಷ್ಣ ಮೋಹನ್ ವಡ್ರೇವು, ಡಾ.ಕೃಷ್ಣನ್ ನಂದಬಾಲನ್ ಮತ್ತು ಪ್ರೊ. ಎಂ.ನರಸಿಂಹ ಮೂರ್ತಿ ಅವರು ಆಯ್ಕೆಯಾಗಿದ್ದಾರೆ.
ಹಳೆಯ ವಿದ್ಯಾರ್ಥಿಗಳು ತಮ್ಮ ವೃತ್ತಿ, ಸಮಾಜ ಮತ್ತು ಸಂಸ್ಥೆಗೆ ನೀಡಿದ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಭಾರತೀಯ ವಿಜ್ಞಾನ ಸಂಸ್ಥೆಯು ವಾರ್ಷಿಕ ಪ್ರಶಸ್ತಿಗಳು ನೀಡುತ್ತದೆ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು. ಈ ಸಂದರ್ಭದಲ್ಲಿ 2020 ಮತ್ತು 2021ರ ಸಾಲಿನ ಪ್ರಶಸ್ತಿ ಪುರಸ್ಕೃತರನ್ನು ಸಹ ಗುರುತಿಸಲಾಗುವುದು ಎಂದು ಐಐಎಸ್‌ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ
- 1. ಪ್ರೊ.ಭರತ್ ಕುಮಾರ್ ಭಾರ್ಗವ ಅವರು ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿದ್ದಾರೆ. ಸೈಬರ್ ಭದ್ರತೆ, ಅನ್ವಯಿಕ ಯಂತ್ರ ಕಲಿಕೆ ಮತ್ತು ಸ್ವಾಯತ್ತ ವ್ಯವಸ್ಥೆಗಳಿಗೆ ಕೊಡುಗೆಗಳನ್ನು ನೀಡಿದ್ದಾರೆ.
- 2. ಕರ್ನಲ್ ನಿವೃತ್ತ ಶಂಕರ್ ಪ್ರಸ್ತುತ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. 1986ರಲ್ಲಿ ಸ್ವಯಂ ನಿವೃತ್ತಿಯಾಗುವವರೆಗೂ ವಿವಿಧ ಕ್ಷೇತ್ರಗಳು ಹಾಗೂ ಸೇನೆಯಲ್ಲಿ ಪ್ರತಿಷ್ಠಿತ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
- 3. ಡಾ.ಕೃಷ್ಣ ಮೋಹನ್ ವಡ್ರೇವು ಅವರು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಸ್ಥಳೀಯ ಲಸಿಕೆಗಳ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುವ ಹೆಸರುವಾಸಿಯಾಗಿದ್ದಾರೆ. ಇದರಲ್ಲಿ ಟೈಫಾಯಿಡ್ ಕಾಂಜುಗೇಟ್ ಲಸಿಕೆ, ನೊವೆಲ್ ಲೋ - ಡೋಸ್ ರೋಟಾವೈರಸ್ ಲಸಿಕೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಭಿವೃದ್ಧಿಪಡಿಸಲಾದ ಕೋವಾಕ್ಸಿನ್ ಲಸಿಕೆ ಪ್ರಮುಖವಾಗಿದೆ.
- 4. ಡಾ.ಕೃಷ್ಣನ್ ನಂದಬಾಲನ್ ಅವರು ಔಷಧ ಅನ್ವೇಷಣೆ ಮತ್ತು ಅಭಿವೃದ್ಧಿ ಸಂಸ್ಥೆಯಾದ InveniAI LLC ನ ಅಧ್ಯಕ್ಷರು ಮತ್ತು ಸಿಇಒ ಆಗಿದ್ದಾರೆ. BioXcel ಕಾರ್ಪೊರೇಶನ್‌ನ ಅಧ್ಯಕ್ಷರು ಮತ್ತು ಸಹ ಸಂಸ್ಥಾಪಕರೂ ಆಗಿದ್ದಾರೆ.
- 5. ಪ್ರೊ.ಎಂ.ನರಸಿಂಹ ಮೂರ್ತಿ ಅವರು ಪ್ರಸ್ತುತ ಐಐಎಸ್‌ಸಿಯಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದು, ಕಂಪ್ಯೂಟರ್ ವಿಜ್ಞಾನಕ್ಕೆ ಪ್ರೇರಕ ಕೊಡುಗೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ವಿಶ್ವದ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಕರ್ನಾಟಕ ಸೇರಿ ದೇಶದ ಹಲವು ವಿಜ್ಞಾನಿಗಳ ಹೆಸರು