ಬೆಂಗಳೂರು: ಬರ, ಗ್ಯಾರಂಟಿ ಯೋಜನೆಗಳಿಂದ ತೀವ್ರ ಆರ್ಥಿಕ ಹೊರೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಇದೀಗ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಕೇಂದ್ರ ಸರ್ಕಾರ ಕರ್ನಾಟಕದ ಐಜಿಎಸ್ಟಿ ಸಂಗ್ರಹದಿಂದ 798 ಕೋಟಿ ರೂ. ಕಡಿತಗೊಳಿಸಿದೆ.
IGST ಅಂದರೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಮತ್ತು ಸೇವೆಗಳು ಚಲಿಸಿದಾಗ ಐಜಿಎಸ್ಟಿ ವಿಧಿಸಲ್ಪಡುತ್ತದೆ. ಐಜಿಎಸ್ಟಿ ಹಂತದಲ್ಲಿ ಬರುವ ಆದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ. ಐಜಿಎಸ್ಟಿ ತೆರಿಗೆ, ಸರಕು ಉತ್ಪತ್ತಿಯಾದ ರಾಜ್ಯದಿಂದ ಅದು ತಲುಪುವ ರಾಜ್ಯಕ್ಕೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡುತ್ತದೆ. ಹೀಗೆ ನವೆಂಬರ್ನಲ್ಲಿ ರಾಜ್ಯ ಸಂಗ್ರಹಿಸಿರುವ ಐಜಿಎಸ್ಟಿಯಿಂದ ಕೇಂದ್ರ ಸರ್ಕಾರ 798.03 ಕೋಟಿ ರೂ. ಕಡಿತ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆಘಾತ ನೀಡಿದೆ.
ಏತಕ್ಕಾಗಿ ರಾಜ್ಯದ ಐಜಿಎಸ್ಟಿ ಕಡಿತ?: ನವೆಂಬರ್ನಲ್ಲಿ ರಾಜ್ಯ ಸಿಜಿಎಸ್ಟಿ, ಎಸ್ಜಿಎಟ್ಸಿ ಹಾಗೂ ಐಜಿಎಸ್ಟಿ ರೂಪದಲ್ಲಿ ಒಟ್ಟು 11,970 ಕೋಟಿ ರೂ. ಸಂಗ್ರಹ ಮಾಡಿದೆ. ಕರ್ನಾಟಕ ನವೆಂಬರ್ ತಿಂಗಳಲ್ಲಿ ಐಜಿಎಸ್ಟಿ ರೂಪದಲ್ಲಿ ಕೇಂದ್ರ ಸರ್ಕಾರದಿಂದ 3,600 ಕೋಟಿ ರೂ. ಪಡೆಯಬೇಕಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಅದರಿಂದ 798.03 ಕೋಟಿ ರೂ. ಕಡಿತಗೊಳಿಸಿದೆ.
ರಾಜ್ಯಗಳಿಗೆ ಸುಮಾರು 34,000 ಕೋಟಿ ರೂ. ಮೊತ್ತದಷ್ಟು ನಿಗದಿಗಿಂತ ಹೆಚ್ಚುವರಿ ಹೂಡುವಳಿ ತೆರಿಗೆ ಜಮೆ (input tax returns)ಯಾಗಿದ್ದು, ಇದನ್ನು ರಾಜ್ಯ ಹಾಗೂ ಕೇಂದ್ರದ ಪಾಲಿನ IGST ಯಿಂದ ಕಡಿತ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಕೇಂದ್ರ ಸರ್ಕಾರ ತನ್ನ ಪಾಲಿನ ಐಜಿಎಸ್ಟಿ ಯಿಂದ 17,000 ಕೋಟಿ ರೂ. ಹಾಗೂ ರಾಜ್ಯಗಳ ಪಾಲಿನ ಐಜಿಎಸ್ಟಿಯಿಂದ 18,000 ಕೋಟಿ ರೂ. ಕಡಿತ ಮಾಡಲಿದೆ. ಈ ಪೈಕಿ ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಂದ 9,000 ಕೋಟಿ ರೂ. ಕಡಿತ ಮಾಡಿದೆ. ಈ ಪೈಕಿ ಕರ್ನಾಟಕ ರಾಜ್ಯದ ಪಾಲಿನಿಂದ ಮೊದಲ ಕಂತಿನಲ್ಲಿ 798.03 ಕೋಟಿ ರೂ. ಕಡಿತವಾಗಿದೆ.
ಸ್ಪಷ್ಟನೆ ಕೋರಿದ ಸಿಎಂ ಸಿದ್ದರಾಮಯ್ಯ: ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಸ್ಪಷ್ಟೀಕರಣ ಕೋರಿದ್ದಾರೆ. ಈ ತೆರಿಗೆ ಕಡಿತದಿಂದ ಆಗುವ ಬೊಕ್ಕಸದ ಮೇಲಿನ ತೀವ್ರ ಹೊರೆಯನ್ನು ಮನಗಂಡ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದು, ಈ ಹಠಾತ್ ಕಡಿತಕ್ಕೆ ಕಾರಣ, ಸ್ಪಷ್ಟೀಕರಣ ಕೋರಿದ್ದಾರೆ. ಪತ್ರದಲ್ಲಿ ರಾಜ್ಯಗಳಿಗೆ ಮಾಡಿರುವ ಹೆಚ್ಚುವರಿ ಹೂಡುವಳಿ ತೆರಿಗೆ ಜಮೆ ಹಿಂದಿನ ಕಾರಣ, ಅದರ ಲೆಕ್ಕಾಚಾರ, ಹಾಗೂ ಅವುಗಳ ವಸೂಲಾತಿಗೆ ಅನುಸರಿಸುತ್ತಿರುವ ಪದ್ಧತಿ ಬಗ್ಗೆ ಸ್ಪಷ್ಟೀಕರಣ ಕೋರಿದ್ದಾರೆ.
ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚುವರಿ ಹೂಡುವಳಿ ತೆರಿಗೆ ಜಮೆಯನ್ನು ಕಂತುಗಳಲ್ಲಿ ಕಡಿತಗೊಳಿಸಲು ಮನವಿ ಮಾಡಿದ್ದಾರೆ. ರಾಜ್ಯ ಬೊಕ್ಕಸದ ಮೇಲಾಗುವ ಪ್ರತಿಕೂಲ ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರ್ಕಾರ ಐಜಿಎಸ್ಟಿ ಕಡಿತವನ್ನು ಕನಿಷ್ಠ 10 ಕಂತುಗಳಲ್ಲಿ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಎರಡನೇ ಬಾರಿಗೆ ದಾಖಲೆಯ 1.72 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ: ಕರ್ನಾಟಕದಿಂದ ಎಷ್ಟು ಕಲೆಕ್ಷನ್ ಗೊತ್ತಾ?