ಬೆಂಗಳೂರು: ಭಾನುವಾರ ದೇಶಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಿತು. ನಿನ್ನೆ ಲಸಿಕೆ ಹಾಕಿಸಲಾಗದವರಿಗೆ ಇನ್ನೂ ಮೂರು ದಿನಗಳ ಕಾಲಾವಕಾಶ ಇದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಕಲಾವತಿ ತಿಳಿಸಿದ್ದಾರೆ.
ಬೆಂಗಳೂರಿನ ಪಾಲಿಕೆ 135 ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 5,71,125 ಮಕ್ಕಳಲ್ಲಿ ಮೊದಲನೇ ದಿನ 4,71,593(ಶೇ.82.57) ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು, 63,73,840 ಮಕ್ಕಳ ಪೈಕಿ 58,10,493ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಈಗಾಗಲೇ ಶೇಕಡ 91.16 % ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಮೆಟ್ರೊ ನಿಲ್ದಾಣ ಮತ್ತು ನಿಲ್ದಾಣ ಒಳಗೆ ಡಿಸ್ಲೇಪ್ ಮೂಲಕ ಮಾರುಕಟ್ಟೆಗಳು, ಮದುವೆ ಮಂಟಪಗಳಿಗೆ ಕಾರ್ಯಕರ್ತರು ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಿದ್ದಾರೆ. ಲಾಲ್ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಇದ್ದ ಕಾರಣ ಅಲ್ಲಿ 6 ತಂಡಗಳನ್ನು ನಿಯೋಜಿಸಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಕೆಎಂಎಫ್ ನಿಂದಲೂ ಹಾಲಿನ ಪ್ಯಾಕೇಟ್ ಮೇಲೆ ಲಸಿಕೆ ಹಾಕುವಂತೆ ಜಾಗೃತಿ ಮೂಡಿಸಲಾಯಿತು.
ಭಾನುವಾರ ನಿಮ್ಮ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಲ್ಲ ಅಂದರೆ ಚಿಂತೆ ಬೇಡ. ಜನವರಿ 22 ರವರೆಗೆ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದ್ದು, ಲಸಿಕೆ ಹಾಕಿಸಿಕೊಳ್ಳದ ಮಕ್ಕಳನ್ನು ಹುಡುಕಿ ಲಸಿಕೆ ಹಾಕಲಾಗುತ್ತದೆ. ಆದ್ರೆ ಇಂದಿನಿಂದ ಪಲ್ಸ್ ಪೋಲಿಯೋ ಲಸಿಕೆ ಬೂತ್ ಇರೋದಿಲ್ಲ. ಬದಲಾಗಿ ಮನೆ ಮನೆಗೆ ಕಾರ್ಯಕರ್ತರು ತೆರಳಿ ಲಸಿಕೆ ಹಾಕಲಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ. ಕಲಾವತಿ ಮಾಹಿತಿ ನೀಡಿದ್ದಾರೆ.