ಬೆಂಗಳೂರು: ಮಹಿಳೆಯರನ್ನು ತಾರತಮ್ಯದಿಂದ ನೋಡುತ್ತಿರುವ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಹೈಕೋರ್ಟ್ ಪ್ರಸ್ತುತದ ನಿಯಮಗಳಲ್ಲಿ ಪುರುಷರು ಎಂದು ಇರುವೆಡೆ ಸಿಬ್ಬಂದಿ ಎಂದು ಬದಲಾಯಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದವರ ಮಗಳಿಗೆ ಮಾಜಿ ಯೋಧರ ಅವಲಂಬಿತರ ಗುರುತಿನ ಚೀಟಿ ನೀಡಲು ನಿರಾಕರಿಸಿದ್ದ ಸೈನಿಕ ಕಲ್ಯಾಣ ಇಲಾಖೆಯ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಅಲ್ಲದೆ ಪ್ರಸ್ತುತ ಮಹಿಳೆಯರು ಇಂದು ಅತ್ಯುನ್ನತ ಸ್ಥಾನಗಳನ್ನು ಗಳಿಸುತ್ತಿದ್ದಾರೆ. ಅವರು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಅಧಿಕಾರಿಗಳ ಹಂತದಲ್ಲಿ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಶತಮಾನಗಳಷ್ಟು ಹಳತಾದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿದ್ದ ಲಿಂಗ ತಾರತಮ್ಯ ತೊಲಗಬೇಕು ಮತ್ತು ನೀತಿ ನಿರೂಪಕರು ಈ ಬಗ್ಗೆ ಚಿಂತನೆ ನಡೆಸಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೆ, ಗುರುತಿನ ಚೀಟಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ತಾರತಮ್ಯ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಪೀಠ, ಆ ಕುರಿತು ಅಗತ್ಯ ತಿದ್ದುಪಡಿ ಮಾಡುವಂತೆ ಸೂಚಿಸಿದೆ.ಜತೆಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2021ರ ಆ.26ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಅರ್ಜಿದಾರರನ್ನು ನಿವೃತ್ತ ಯೋಧರ ಕೋಟಾದಲ್ಲಿ ಪರಿಗಣಿಸಬೇಕು ಎಂದೂ ಸಹ ಆದೇಶಿಸಿದೆ.
ಮಾಜಿ ಯೋಧರ ಪುತ್ರ ಅಥವಾ ಪುತ್ರಿ ಯಾರಾದರೂ 25 ವರ್ಷದ ನಂತರ ಅವರಿಗೆ ಒಂದೇ ಮಾರ್ಗಸೂಚಿ ಇರುತ್ತದೆ. 25 ವರ್ಷದ ಕೆಳಗಿನ ಪುತ್ರಿ ಮದುವೆ ಆಗಿದ್ದಾರೆ ಎನ್ನುವ ಕಾರಣಕ್ಕೆ, ಅವರು ಐಡಿ ಕಾರ್ಡ್ ಪಡೆಯುವ ಹಕ್ಕಿನಿಂತ ವಂಚಿತರನ್ನಾಗಿ ಮಾಡುವುದು ಸರಿಯಲ್ಲ. ಇದು ಸಂವಿಧಾನದ ಕಲಂ 14 ಮತ್ತು 15ರ ಉಲ್ಲಂಘನೆಯಾಗುತ್ತದೆ. ಪುತ್ರ ಮದುವೆ ಆಗಲಿ ಅಥವಾ ಆಗದಿದ್ದರೂ ಪ್ರಯೋಜನ ಪಡೆಯುತ್ತಾರೆ, ಆದರೆ ಪುತ್ರಿ ಅವಿವಾಹಿತರಾಗಿ ಉಳಿದರೆ ಮಾತ್ರ ಪ್ರಯೋಜನ ಪಡೆಯುತ್ತಾರೆ ಎಂಬ ನಿಯಮ ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಈ ರೀತಿಯ ಪ್ರಕ್ರಿಯೆ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ. ಲಿಂಗದ ಆಧಾರದ ಮೇಲೆ ಪ್ರಯೋಜನ ನೀಡುವುದು ಸರಿಯಲ್ಲ, ಇದು ಅಸಮಾನತೆಯಾಗುತ್ತದೆ. ಪುತ್ರಿ ಮದುವೆಯಾಗಿದ್ದ ತಕ್ಷಣ ಆಕೆಯ ಹಕ್ಕು ಮೊಟಕುಗೊಳಿಸುವುದು ಸರಿಯಲ್ಲ. ಪುತ್ರ ಪುತ್ರನಾಗಿಯೇ ಇದ್ದಾಗ, ಪುತ್ರಿಯನ್ನೂ ಸಹ ಅದೇ ರೀತಿ ಪರಿಗಣಿಸಬೇಕಾಗುತ್ತದೆ. ಮದುವೆ ಆಗುವುದರಿಂದ ಪುತ್ರನ ಸ್ಥಿತಿಗತಿ ಬದಲಾಗಲಿಲ್ಲವೆಂದರೆ, ಪುತ್ರಿಯ ಸ್ಥಾನ ಏಕೆ ಬದಲಾಗಬೇಕು ಎಂದೂ ನ್ಯಾಯಪೀಠ ತನ್ನ ಆದೇಶದಲ್ಲಿ ಪ್ರಶ್ನಿಸಿದೆ.
ಪ್ರಕರಣದ ಹಿನ್ನೆಲೆ ಏನು? ಅರ್ಜಿದಾರರು ಕೆಇಎ ನಡೆಸುವ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಮಾಜಿ ಯೋಧರ ಕೋಟಾದಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ತಮ್ಮ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಅವಲಂಬಿತರ ಗುರುತಿನ ಚೀಟಿಗೆ ಸೈನಿಕ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿದಾರರು ವಿವಾಹವಾಗಿರುವುದರಿಂದ ನಿಯಮದಂತೆ ಅವರಿಗೆ ಐಡಿ ಕಾರ್ಡ್ ನೀಡಲಾಗದು ಎಂದು ಇಲಾಖೆ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ನಲ್ಲಿ ಅವರು ಅರ್ಜಿ ಸಲ್ಲಿಸಿದ್ದರು.
ಇದನ್ನೂಓದಿ:ಮಹದಾಯಿ ಉಳಿಸಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲು ಗೋವಾ ಬಿಜೆಪಿ ನಿರ್ಧಾರ