ಬೆಂಗಳೂರು: ರಾತ್ರಿ ಅಕ್ಕಿ ಕೊಡುತ್ತೇವೆಂದು ಹೇಳಿ, ಬೆಳಗ್ಗೆ ಅಕ್ಕಿ ಇಲ್ಲ ಅಂದರೆ ಹೇಗೆ?. ನಮ್ಮಿಂದ ತೆರಿಗೆ ತೆಗೆದುಕೊಳ್ಳಲ್ವಾ?. ಹಾಗಾದರೆ ನಮ್ಮ ತರಿಗೆ ವಾಪಸ್ ಕೊಡಿ ನೋಡೋಣ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಡ್ ಸೆಕ್ಯುರಿಟಿ ಆ್ಯಕ್ಟ್ ತಂದಿದ್ದು ಯಾಕೆ?. ಅದನ್ನು ತಂದಿದ್ದು ನಮ್ಮ ಮನಮೋಹನ್ ಸಿಂಗ್ ಅವರು. ಯಾರೂ ಹಸಿವಿನಿಂದ ಇರಬಾರದು ಅಂತ ತಂದಿರುವ ಪುಡ್ ಆ್ಯಕ್ಟ್ ಇದು. 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ, ಆದರೂ ಈಗ ಅಕ್ಕಿ ಇಲ್ಲ ಅಂತೀರಾ, ಹಾಗಾದರೆ ತನಿಖೆ ಮಾಡಸ್ತಾರಾ ಎಂದು ಪ್ರಶ್ನಿಸಿದರು.
ಕರ್ನಾಟಕ ಭಾರತದ ಒಕ್ಕೂಟ ವ್ಯವಸ್ಥೆ ಸೇರಿದೆ. ರಾಜ್ಯದ ಕ್ಷೇಮಾಭಿವೃದ್ಧಿಗೆ ಸ್ಪಂದಿಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ನಾವು ಹಣ ಕೊಡುತ್ತೇವೆ, ಅಕ್ಕಿ ಕೊಡಿ ಪುಕ್ಕಟೆ ಕೇಳಿಲ್ಲ. ಇಲ್ಲ ಅಂದರೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ 34 ರೂ. ನಂತೆ ಅಕ್ಕಿ ಕೊಡುವಂತೆ ರಾಜ್ಯ ಸರ್ಕಾರದಿಂದ ಕೇಳಿದ್ದೆವು. ಮೊದಲು ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅವರು ಈಗ ಇಲ್ಲ ಅಂತಿದ್ದಾರೆ. ಅವರ ಬಳಿ ಸ್ಟಾಕ್ ಇದೆ. 7 ಲಕ್ಷ ಮೆ.ಟನ್ ಇದೆ ಅಂತ ಅವರೇ ಹೇಳಿದ್ದಾರೆ. ನಾವು ಉಚಿತವಾಗಿ ಕೇಳುತ್ತಿಲ್ಲ. ಹಣ ಕೊಡುತ್ತೇವೆಂದರೂ ಅವರು ನೀಡುತ್ತಿಲ್ಲ. ಬಡವರ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ದೂರಿದರು.
ನಾವು ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ಸ್ಥಗಿತಗೊಳಿಸುವುದಿಲ್ಲ. ಬಡವರಿಗೆ 10 ಕೆ.ಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ. ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರದ ಅನುಸರಿಸುತ್ತಿರುವ ಮಲತಾಯಿ ಧೋರಣೆ ಸರಿಯಲ್ಲ. ಹಾಗಾದರೆ ನೀವು ತಂದಿರುವ ಜಿಎಸ್‌ಟಿ ನಾವ್ಯಾಕೆ ಒಪ್ಪಿಕೊಳ್ಳಬೇಕು. ನಮ್ಮ ಪಾಲಿನ ಜಿಎಸ್‌ಟಿ ಹಣ ನಮಗೆ ವಾಪಸ್ ಕೊಡಿ ಎಂದು ಒತ್ತಾಯಿಸಿದರು.
ಅನ್ನಭಾಗ್ಯ ಇದು ಜನಪರ ಕಾರ್ಯಕ್ರಮ, ಇದರಲ್ಲಿ ರಾಜಕೀಯ ಮಾಡಿದರೆ, ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಅನುಭವಿಸಬೇಕುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, FCI ಇರುವುದರಿಂದಲೇ ನಾವು ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದ್ದು, ಅದಕ್ಕೆ ಅದರಲ್ಲಿ ನಿಗದಿ ಮಾಡಿದ ದರದಲ್ಲೇ ಅಕ್ಕಿ ಕೊಡಿ ಅಂತ ಕೇಳ್ತಿದ್ದೇವೆ. ಕೆಲವೊಂದು ತಾಂತ್ರಿಕ ತಪ್ಪಾಗಿದ್ದರೆ ಒಪ್ಪಿಕೊಳ್ಳುತ್ತೇವೆ. ಹಾಗಂತ ನೀವು ಅಕ್ಕಿ ಇಲ್ಲ ಅಂದರೆ ಹೇಗೆ ಎಂದು ಮರುಪ್ರಶ್ನೆ ಹಾಕಿದರು.
ನಿಮ್ಮ ಒಕ್ಕೂಟ ವ್ಯವಸ್ಥೆಯಿಂದ ಕರ್ನಾಟಕ ರಾಜ್ಯವನ್ನು ತೆಗೆದು ಹಾಕಿ ನೋಡೋಣ. ನಿಮಗೆ ತಾಕತ್ ಇದ್ದರೆ ದೇಶಗಳಲ್ಲಿನ ಒಕ್ಕೂಟ ವ್ಯವಸ್ಥೆಯಲ್ಲಿರುವ ಕರ್ನಾಟಕ ರಾಜ್ಯವನ್ನು ತೆಗೆದುಹಾಕಿ ನೋಡೋಣ. ಅಕ್ಕಿಯಲ್ಲಿ ಯಾಕೆ ರಾಜಕೀಯ ಮಾಡ್ತೀರಾ?. ಇಲ್ಲ ಅಂದರೆ ನಾವು ನಿಮ್ಮ ಜಿಎಸ್‌ಟಿ ಒಪ್ಪಲ್ಲ,ನೀವು ಇದನ್ನು ಒಪ್ಪಿಕೊಳ್ತೀರಾ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
ಇದನ್ನೂಓದಿ: Cyclone Biparjoy: ಚಂಡಮಾರುತಕ್ಕೆ ನಲುಗಿದ ಗುಜರಾತ್..300 ಕಂಬಗಳು ನಾಶ, 900 ಗ್ರಾಮಗಳಿಗೆ ವಿದ್ಯುತ್ ಕಟ್