ಬೆಂಗಳೂರು : ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತಮ್ಮೇಶ್ ಗೌಡರನ್ನು ಗೆಲ್ಲಿಸಿಕೊಂಡು ಬರದೇ ಇದ್ದಲ್ಲಿ ನಾನು ತಲೆ ಎತ್ತಿಕೊಂಡು ಓಡಾಡೊಕ್ಕಾಗೋದಿಲ್ಲ. ಅಭ್ಯರ್ಥಿಯನ್ನು ಗೆಲ್ಲಿಸಿ ಮರ್ಯಾದೆ ಉಳಿಸಿ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದ ಕಾರ್ಯಕರ್ತರಿಗೆ ಕರೆ ನೀಡಿದರು.
ಬ್ಯಾಟರಾಯನಪುರದಲ್ಲಿಂದು ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ತಮ್ಮೇಶ್ ಗೌಡಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಮುನೀಂದ್ರ ಕುಮಾರ್ ಅಸಮಾಧಾನಗೊಂಡಿದ್ದು, ಮುಂದಿನ ನಡೆ ಬಗ್ಗೆ ಚರ್ಚಿಸಲು ಬೆಂಬಲಿಗರ ಸಭೆ ಕರೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ್ದ ಮುನೀಂದ್ರ ಕುಮಾರ್ ಇದೀಗ ತಮ್ಮ ಮುಂದಿನ ನಡೆ ಬಗ್ಗೆ ಬೆಂಬಲಿಗರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯಿಂದ ವಿಚಲಿತರಾದ ಬಿ.ವೈ ವಿಜಯೇಂದ್ರ ಆಪ್ತನಾಗಿರುವ ತಮ್ಮೇಶ್ ಗೌಡ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಬ್ಯಾಟರಾಯನಪುರ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ಗೆಲ್ಲಿಸಲು ಕರೆ ನೀಡಿದರು. ತಮ್ಮೇಶ್ ಗೌಡ ಗೆಲ್ಲದೇ ಹೋದರೆ ನಾನು ತಲೆ ಎತ್ತಿಕೊಂಡು ಓಡಾಡೊಕ್ಕಾಗಲ್ಲ. ಇವನ್ನೊಬ್ಬನಿಗಾಗಿ ಕೊನೆತನಕ ಹೋರಾಟ ಮಾಡಿ, ಮೂರು , ನಾಲ್ಕು ಬಾರಿ ಕುಳಿತ ಚರ್ಚೆ ಮಾಡಿ ಟಿಕೆಟ್ ನೀಡಿದ್ದೇವೆ. ಹಾಗಾಗಿ ನೀವು ತಮ್ಮೇಶ್ ಗೌಡರನ್ನು ಗೆಲ್ಲಿಸಿಕೊಂಡು ಬನ್ನಿ ಇಲ್ಲದಿದ್ದರೆ ನನ್ನ ಮರ್ಯಾದೆ ಉಳಿಯುವುದಿಲ್ಲ ಎಂದರು.
ಪುತ್ರನಿಗೆ ಟಿಕೆಟ್ ಕೇಳಿದ್ದೆ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಗೆ ನನ್ನ ಸ್ಪರ್ಧೆಯ ಜೊತೆಗೆ ಪುತ್ರನಿಗೂ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್‌ಗೆ ಕೇಳಿದ್ದು ನಿಜ. ಆದರೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ನಾನು ಸುಮ್ಮನಾದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಟಿಕೆಟ್ ಘೋಷಣೆ ಹಿನ್ನಲೆಯಲ್ಲಿ ಬಿಎಸ್ವೈ ಅಧಿಕೃತ ನಿವಾಸ ಕಾವೇರಿಗೆ ವಸತಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು. ಗೋವಿಂದರಾಜನಗರ ಕ್ಷೇತ್ರ ಕೈ ತಪ್ಪಿದ್ದಕ್ಕೆ ಬೇಸರಗೊಂಡ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ಕ್ಷೇತ್ರ ಎರಡು ಕಡೆ ಸ್ಪರ್ಧೆಗೆ ಟಿಕೆಟ್ ನೀಡಿದ ಕುರಿತು ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಗೋವಿಂದರಾಜ ನಗರದಲ್ಲಿ ಪುತ್ರನಿಗೆ ಟಿಕೆಟ್ ಕೇಳಿದ್ದೆ. ಬಿಜೆಪಿಯಲ್ಲಿ ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ಕೊಡಲ್ಲ. ಹೀಗಾಗಿ ನಾನು ಸುಮ್ಮನಾದೆ. ಬೇರೆಯವರ ಮಕ್ಕಳಿಗೆ ಕೊಟ್ಟಿದ್ದಾರೆ ಎನ್ನುವುದು ನಿಜ. ಆದರೆ ಅಲ್ಲೆಲ್ಲಾ ಕೇವಲ ಮಕ್ಕಳು ಸ್ಪರ್ಧೆ ಮಾಡುತ್ತಿದ್ದಾರೆ. ಅವರ ತಂದೆಗೆ ಟಿಕೆಟ್ ಇಲ್ಲ. ಉಮೇಶ್ ಕತ್ತಿ ಇಲ್ಲ. ಹಾಗಾಗಿ ಅವರ ಮಗನಿಗೆ ಕೊಟ್ಟಿದ್ದಾರೆ. ಯಡಿಯೂರಪ್ಪ ಸ್ಪರ್ಧೆ ಮಾಡಲ್ಲ ಹೀಗಾಗಿ ಅವರ ಮಗನಿಗೆ ಕೊಟ್ಟಿದ್ದಾರೆ. ಆನಂದ್ ಸಿಂಗ್ ಬದಲು ಅವರ ಮಗನಿಗೆ ಕೊಟ್ಟಿದ್ದಾರೆ. ಅಲ್ಲಿ ಆನಂದ್ ಸಿಂಗ್ ಸ್ಪರ್ಧೆ ಮಾಡಲ್ಲ ಏನೇ ಆದರೂ ಪಕ್ಷ ತೀರ್ಮಾನ ಮಾಡಿಯೇ ಟಿಕೆಟ್ ಘೋಷಣೆ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಬಿಎಸ್ವೈ ಭೇಟಿಯಾದ ಚಿಕ್ಕಪೇಟೆ ಶಾಸಕ : ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಚಿಕ್ಕಪೇಟೆ ಹಾಲಿ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಭೇಟಿ ನೀಡಿದರು. ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದರು. ನಂತರ ಮಾತನಾಡಿದ ಉದಯ್ ಗರುಡಾಚಾರ್, ನಮ್ಮ ನಾಯಕರ ಆಶೀರ್ವಾದ ಪಡೆದು ಈಗ ಬಂದೆ. ಕ್ಷೇತ್ರದಲ್ಲಿ ಪರಿಸ್ಥಿತಿ ತುಂಬಾ ಚೆನ್ನಾಗಿದೆ, ಚಿಕ್ಕಪೇಟೆ ಕ್ಷೇತ್ರದಲ್ಲಿ ಯಾವ ಬಂಡಾಯವೂ ಇಲ್ಲ. ಕ್ಷೇತ್ರದಲ್ಲಿ ಪಕ್ಷ ಗೆಲ್ಲುವುದು ನಮ್ಮ ಗುರಿ. ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ. ಅನೇಕರು ಪಕ್ಷ ಸೇರ್ಪಡೆ ಆಗಿದ್ದಾರೆ. ಪಕ್ಷ ಸೇರ್ಪಡೆಯಿಂದ ನಮಗೂ ಒಳ್ಳೆಯದಾಗಿದೆ ಎಂದರು.
ಇದನ್ನೂ ಓದಿ : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ತವನಪ್ಪ ಅಷ್ಟಗಿ ರಾಜೀನಾಮೆ