ಬೆಳಗಾವಿ: ಧೈರ್ಯವಂತರು, ಬಂಡೆ ಎನಿಸಿಕೊಳ್ಳುವ ನಿಮಗೆ ಸಿಬಿಐ ಅನ್ನು ಎದುರಿಸಲು ಆಗುವುದಿಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾಲೆಳೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಸ್ವತಂತ್ರ ಸಂಸ್ಥೆ, ಅದು ಕಾಂಗ್ರೆಸ್ ಕಾಲಘಟ್ಟದಲ್ಲಿ ನಿರ್ಮಾಣ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೈಡ್ ಆಗಿದೆ. ಲಾಲೂಪ್ರಸಾದ್, ಜಯಲಲಿತಾರಂತಹ ಘಟಾನುಘಟಿ ನಾಯಕರ ಮನೆ ಮೇಲೆ ಸಿಬಿಐ ದಾಳಿಯಾಗಿದೆ. ಇದನ್ನು ಕಾಂಗ್ರೆಸ್ ರಾಜಕಾರಣ ಮಾಡಿ ಸಿಬಿಐ ದಾಳಿ ಮಾಡಿಸಿದ್ದಾ? ಕಾಂಗ್ರೆಸ್ ಅದನ್ನೆಲ್ಲಾ ರಾಜಕೀಯ ದ್ವೇಷಕ್ಕಾಗಿಯೇ ಮಾಡಿಸಿತ್ತಾ? ಕಾಂಗ್ರೆಸ್ ಸಿಬಿಐ ಅನ್ನು ದಾಳವಾಗಿ ಮಾಡಿಕೊಂಡು ಆಟವಾಡಿಸಿತ್ತಾ? ಅವರೇ ಮಾಡಿಸಿದ್ದರೆ ಇದು ಕೂಡ ಹಾಗೇ ಎಂದು ತಿಳಿದುಕೊಳ್ಳೋಣ ಎಂದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಯಾಗಿದೆ, ಐಟಿ ತನಿಖೆಯಾಗಿದೆ. ಇದರಿಂದ ನಿಮಗೇಕೆ ಭಯ ? ಯಾಕೆ ಜನ ಸೇರಿಸಬೇಕು. ಜೈಲಿಂದ ಬರುವಾಗ ಮೆರವಣಿಗೆ. ಜೈಲಿಗೆ ಹೋಗುವಾಗ ಮೆರವಣಿಗೆ ಮಾಡುವುದು ಏಕೆ. ನೀವು ಸರಿ ಇದ್ದರೆ ಕಾನೂನಾತ್ಮಕ ಹೋರಾಟ ಮಾಡಿ ಪರಿಶುದ್ಧರಾಗಿ ಹೊರ ಬನ್ನಿ. ಕಾನೂನಿಗೆ ಹೆದರೋದು ಏಕೆ? ನೀವು ಧೈರ್ಯವಂತ, ಬಂಡೆ ಎಲ್ಲರನ್ನೂ ಎದುರಿಸುವವರು ಸಿಬಿಐನ ಎದುರಿಸಲು ಆಗವುದಿಲ್ಲವೇ ಎಂದು ಕುಟುಕಿದರು.
ಶೀಘ್ರವೇ ಅಭ್ಯರ್ಥಿ ಪಟ್ಟಿ ಬಿಡುಗಡೆ!
ಆರ್.ಆರ್.ನಗರ, ಶಿರಾ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಹೆಸರನ್ನು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಾಗುವುದು. ನಮ್ಮ ಹಿರಿಯರು, ಹೈಕಮಾಂಡ್ ಜತೆ ಚರ್ಚೆ ಮಾಡಿ ಅಭ್ಯರ್ಥಿಯನ್ನು ಘೋಷಿಸುತ್ತಾರೆ ಎಂದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಆಕಾಂಕ್ಷಿಗಳು ಹೆಚ್ಚಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಕಾಂಕ್ಷಿಗಳು ಜಾಸ್ತಿ ಇದ್ದಾರೆ ಅಂದ್ರೆ ಪಕ್ಷ ಬೆಳೆದಿದೆ ಎಂದೇ ಅರ್ಥ. ಆಕಾಂಕ್ಷಿಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಆಕಾಂಕ್ಷಿಗಳನ್ನೆಲ್ಲಾ ಸಮಾಧಾನ ಮಾಡುವ ಶಕ್ತಿ ಬಿಜೆಪಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ 3000 ರೈತರ ಆತ್ಮಹತ್ಯೆಗಳಾಗಿವೆ. ನಿಮ್ಮ ಅಧಿಕಾರಾವಧಿಯಲ್ಲಿ ರೈತರಿಗೆ ಕಣ್ಣೀರು ಹಾಕಿದರೂ ಕಣಿಕರ ತೋರಲಿಲ್ಲ. ಇಂದು ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುವ ಅರ್ಹತೆಯಿಲ್ಲ. ಹೊಸದಾದ ಕಾಯ್ದೆಯಿಂದ ರೈತರು ಆನಂದ ಕಾಣಬಹುದು. ನೇರವಾಗಿ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗೆ ಬೆಲೆ ನಿಗದಿ ಮಾಡಬಹುದು. ರೈತರ ಹೆಸರಿನಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಹೊರಟಿದೆ ಎಂದರು.
ಕೇಂದ್ರ ಸರ್ಕಾರ ಮೋದಿ ನೇತೃತ್ವದಲ್ಲಿ ಫಸಲ್ ಭಿಮಾ ಯೋಜನೆ ಜಾರಿಗೆ ತಂದಿದೆ. ಯಡಿಯೂರಪ್ಪ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದರು. ಬಿಎಸ್‌ವೈ ತಂದಿದ್ದ ಸಾವಯವ ಕೃಷಿ ಆಯೋಗವನ್ನು ಸಿದ್ದರಾಮಯ್ಯ ರದ್ದು ಮಾಡಿಸಿದರು. ಕಾಂಗ್ರೆಸ್ನವರು ನಾಟಕ ಮಾಡಿ ಮಾಡಿಯೇ ಮನೆಗೆ ಹೋಗಿದ್ದಾರೆ. ವಿರೋಧ ಪಕ್ಷವಾಗಲೂ ಕಾಂಗ್ರೆಸ್ ನಾಲಾಯಕ್ ಅಂತ ಜನ ತೋರಿಸಿಕೊಟ್ಟಿದ್ದಾರೆ. ಇನ್ನಷ್ಟು ನಾಟಕ ಮಾಡಿದರೆ ಕಾಂಗ್ರೆಸ್ ಅನ್ನು ಅರಬ್ಬಿ ಸಮುದ್ರಕ್ಕೆ ಬೀಸಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.