ಬೆಂಗಳೂರು: ನಿಮ್ಮ ಸರ್ಕಾರದಲ್ಲಿ ಅತೃಪ್ತ ಶಾಸಕರ ದೊಡ್ಡಪಟ್ಟಿ ಇದೆ. ನಾನು ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಈ ದೌರ್ಭಾಗ್ಯ ಬರಬಾರದಿತ್ತು. ನೀವು ರಾಜೀನಾಮೆ ನೀಡುವುದು ಸೂಕ್ತ. ಸಿಎಂ ಡಿಸಿಎಂ ಇಬ್ಬರೂ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಮಂತ್ರಿಗಳು, ಶಾಸಕರು ಸೇರಿ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ. ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನವದೆಹಲಿ ಪ್ರವಾಸದಿಂದ ವಾಪಸ್ ಆದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಅವನತಿ ನಿನ್ನೆಯಿಂದ ಆರಂಭವಾಗಿದೆ. ಸಿಎಂ ಆಗಿರೋ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಅಂತ ಹೇಳಿಕೆ ನೀಡಿದ್ದಾರೆ. ಅದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಇದರ ತೀರ್ಮಾನ ಕೇಂದ್ರ ನಾಯಕರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಅರ್ಥ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರುವುದಿಲ್ಲ ಅನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಕೆಲವರು ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಬೇಕು ಅಂದರೆ ಮತ್ತೆ ಕೆಲವರು ಡಿಸಿಎಂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದಕ್ಕೆ ಉತ್ತರ ನೀಡಿರೋ ಸಿದ್ದರಾಮಯ್ಯ ಹಾದಿ ಬೀದಿಯಲ್ಲಿ ಹೇಳೋರ ಹೇಳಿಕೆಗೆ ನಾನು ತಲೆಕೆಡಿಸಿಕೊಳ್ಳಲ್ಲ ಅಂದಿದ್ದಾರೆ. ಆದರೆ, ಅದನ್ನು ಹೇಳಿರೋದು ಕಾಂಗ್ರೆಸ್ ಶಾಸಕರು ಎಂದು ತಿರುಗೇಟು ನೀಡಿದ್ದಾರೆ.
ಆರ್ಥಿಕವಾಗಿ ಪಾಪರ್ ಆಗಿರುವ ಸರ್ಕಾರ:ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ಯೋಜನೆಗಳ ಕಾಮಗಾರಿ ಆರಂಭವಾಗಿದ್ದವು. ಈ ಸರ್ಕಾರ ಬಂದ ಬಳಿಕ ಯಾವ ಕೆಲಸ ಕೂಡ ಆಗಿಲ್ಲ. ಅರ್ಧ ಬುಟ್ಟಿ ಮಣ್ಣು ಕೂಡ ಹಾಕಿಲ್ಲ. ಶಾಸಕರುಗಳಿಗೆ ನಾವು ಯಾಕಾದ್ರೂ ಆಯ್ಕೆಯಾಗಿದ್ದೇವೆ ಅಂತಿದ್ದಾರೆ. ಶಾಸಕರ ಕ್ಷೇತ್ರಕ್ಕೆ ಹಣ ಕೊಟ್ಟಿಲ್ಲ. ಒಂದು ರೂಪಾಯಿ ಹಣ ಬಿಡುಗಡೆ ಆಗಿಲ್ಲ. ಇದೊಂದು ಆರ್ಥಿಕವಾಗಿ ಪಾಪರ್ ಆಗಿರೋ ಸರ್ಕಾರ ಎಂದು ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಸಿಎಂ ಆಗಲು ನಾನೂ ಸಿದ್ಧ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಸಂಬಂಧಿಸಿದಂತೆ ಈಶ್ವರಪ್ಪ ಮಾತನಾಡಿ, ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ದಲಿತರ ಹೆಸರು ಹೇಳಿ ವೋಟು ಪಡೆಯುತ್ತಿದ್ದಾರೆ. ನಮ್ಮನ್ನು ಕೋಮುವಾದಿಗಳು ಅಂತ ಹೇಳ್ತಿದ್ದಾರೆ. ಜಾತಿಯ ಹೆಸರಲ್ಲಿ ಸ್ವಾತಂತ್ರ್ಯ ಬಂದ ಬಳಿಕವೂ ಮತ ಪಡೆಯುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಮುಕ್ತಿ ಕೊಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಒಂದೇ ಪಕ್ಷದ ಸಮ್ಮಿಶ್ರ ಸರ್ಕಾರ: ನಿನ್ನೆಯಿಂದ ರಾಜ್ಯದಲ್ಲಿ ಒಂದೇ ಪಕ್ಷದ ಸಮ್ಮಿಶ್ರ ಸರ್ಕಾರ ಜಾರಿಗೆ ಬಂದಿದೆ. ಜಾತಿ ಜನಗಣತಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರೆ, ಅದಕ್ಕೆ ನಾವು ಜಾತಿ ಜನಗಣತಿ ವರದಿ ಬಿಡುಗಡೆ ಮಾಡಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಒಂದೇ ಸರ್ಕಾರದಲ್ಲಿ ಎರಡು ರೀತಿಯ ಅಭಿಪ್ರಾಯ ಕೇಳಿಬರುತ್ತಿವೆ. ಹೀಗಾಗಿ ರಾಜ್ಯದಲ್ಲಿ ಒಂದೇ ಪಕ್ಷದ ಸಮ್ಮಿಶ್ರ ಸರ್ಕಾರ ಇದೆ ಎಂದು ಆಪಾದಿಸಿದರು.
ನಿಮ್ಮ ಕ್ಯಾಬಿನೆಟ್ ಮಂತ್ರಿಗಳು ವರದಿ ಬಿಡುಗಡೆಗೆ ಒಪ್ಪಿಲ್ಲ. ಜಾತಿಗಣತಿ ವರದಿ ಬಿಡುಗಡೆ ಮಾಡ್ತೀರಾ ಇಲ್ಲವೋ.? ನೀವೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿ. ನಿನ್ನೆ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಜಾತಿಗಣತಿಗೆ ಸಂಬಂಧಿಸಿದ ಕಾಂತರಾಜ ಆಯೋಗ ವರದಿ ಸರಿ ಇಲ್ಲ ಅಂತ ಹೇಳಿದ್ದಾರೆ. ಈ ವರದಿಯನ್ನು ಪರಿಶೀಲನೆ ಮಾಡದೆ ಬಿಡುಗಡೆ ಮಾಡ್ತಿದ್ದೀರಾ.? ಯಾಕೆ ಮುಂದೆ ಲೋಕಸಭಾ ಚುನಾವಣೆ ಬರ್ತಿದೆ ಅಂತನಾ.? ಕೋರ್ಟ್ಗೆ ಹೋದ್ರೆ ಕಾಂತರಾಜ ಆಯೋಗ ವರದಿ ಬಿದ್ದು ಹೋಗಲಿದೆ. ನಿಮ್ಮ ನಿಲುವು ಏನು ಎಂದು ಸ್ಪಷ್ಟವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.
ದೆಹಲಿಯಲ್ಲಿ ಒಬಿಸಿ ಸಭೆ: ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ದೆಹಲಿಯಲ್ಲಿ ಒಬಿಸಿ ಸಭೆ ಇತ್ತು. ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿದ್ದೆನು. ಜಾತಿ ಜನಗಣತಿ ವಿಚಾರವಾಗಿಯೇ ಸಭೆ ಇತ್ತು. ಬಿಜೆಪಿಯ ದಿಗ್ಗಜರು ಇದ್ದರು. ಅವರ ಜೊತೆ ಚರ್ಚೆ ಮಾಡಿದೆವು. ಹಿಂದುಳಿದವರಿಗೆ ಅನ್ಯಾಯ ಮಾಡುವುದರ ಬದಲು ಸುಪ್ರೀಂ ಕೋರ್ಟ್ ಏನು ಹೇಳುತ್ತದೆ. ತಜ್ಞರು ಏನು ಹೇಳ್ತಾರೆ. ಅದೆಲ್ಲವನ್ನ ಅಧ್ಯಯನ ಮಾಡಿ ದೇಶಕ್ಕೆ ಅನ್ವಯ ಆಗುವಂತೆ ಜಾರಿಗೆ ತರಲಾಗುವುದು ಆ ಬಗ್ಗೆಯೇ ಚರ್ಚೆ ನಡೆಸಿದೆವು ಎಂದರು.
ಹೈಕಮಾಂಡ್ ಸತ್ತೋಯ್ತಾ ?: ಸಿದ್ದರಾಮಯ್ಯ ಸಿಎಂ ಇರೋವರೆಗೆ ಬೆಂಬಲ, ಬಳಿಕ ಪರಮೇಶ್ವರ್ಗೆ ಬೆಂಬಲ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಹಾಗಾದರೆ ಅವರ ಪ್ರಕಾರ ಹೈಕಮಾಂಡ್ ಸತ್ತೋಯ್ತಾ.? ರಾಜಣ್ಣ ಹೇಳಿದ್ದು ಸಿದ್ದರಾಮಯ್ಯ ಸಿಎಂ ಅಂತ. ಸಿದ್ದರಾಮಯ್ಯ ರಾಜಣ್ಣನ ಹೇಳಿಕೆಯನ್ನೂ ಒಪ್ತರಾ.? ಎಂದು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆ ಮುಗಿಯಲಿ ನಾವು ಏನು ಅಂತ ತೋರಿಸುತ್ತೇವೆ ಎಂದ ಈಶ್ವರಪ್ಪ ತಿಳಿಸಿದರು.
ಇದನ್ನೂಓದಿ:ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ : ಸಚಿವ ಕೃಷ್ಣ ಬೈರೇಗೌಡ