ಬೆಂಗಳೂರು : ಬಂಧನಕ್ಕೆ ಒಳಗಾಗಿರುವ ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಅವರಿಗೆ ನ್ಯಾಯಾಲಯವೇ ಕಾನೂನು ನೆರವಿನ ಮೂಲಕ ವಕೀಲರನ್ನು ನೇಮಿಸಿಕೊಡುವ ಬದ್ಧತೆ ಹೊಂದಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೋಮಶೇಖರ ಅಲಿಯಾಸ್ ಸೋಮ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ಧ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸಂವಿಧಾನದ ವಿಧಿ 39(ಎ) ನಲ್ಲಿ ಆರ್ಥಿಕ ಕಾರಣಗಳೂ ಸೇರಿದಂತೆ ಯಾವುದೇ ಅಸಮರ್ಥತೆಗಳ ಕಾರಣದಿಂದಾಗಿ ಯಾವುದೇ ನಾಗರಿಕನಿಗೆ ನ್ಯಾಯ ಪಡೆಯುವ ಅವಕಾಶವನ್ನು ನಿರಾಸರಿಸುವಂತಿಲ್ಲ ಎಂದು ಹೇಳಿದೆ.
ಹಾಗೆಯೇ, ಇಂತಹ ಸಂದರ್ಭಗಳಲ್ಲಿ ಉಚಿತ ಕಾನೂನು ನೆರವು ನೀಡಲು ಅಗತ್ಯ ಕಾನೂನು ರೂಪಿಸುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ. ಈ ಉದ್ದೇಶವನ್ನು ಈಡೇರಿಸಲು ಕಾನೂನು ಸೇವಾ ಪ್ರಾಧಿಕಾರ ರೂಪಿಸಲಾಗಿದೆ.
ಈ ಪ್ರಾಧಿಕಾರವು ರಾಷ್ಟ್ರೀಯ ಮಟ್ಟದಿಂದ ಹಿಡಿದು ತಾಲೂಕು ಹಂತದವರೆಗೆ ಇದ್ದು, ಸಿಆರ್ಪಿಸಿ ಸೆಕ್ಷನ್ 304ರ ಪ್ರಕಾರ ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿದೆ ಎಂದು ಹೇಳಿದೆ.
ಅಲ್ಲದೇ, ಅರ್ಜಿದಾರರ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಈತನ ಪರ ವಕೀಲರು ಪಾಟಿ ಸವಾಲಿನ ವಿಚಾರಣೆ ವೇಳೆ ಹಾಜರಾಗಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವು ನೀಡುವ ಬದ್ಧತೆಯನ್ನು ವಿಚಾರಣಾ ನ್ಯಾಯಾಲಯ ಹೊಂದಿತ್ತು.
ಆದರೆ, ಉಚಿತ ಕಾನೂನು ನೆರವು ನೀಡಿಲ್ಲ. ಸಾಕ್ಷ್ಯಗಳ ಪಾಟಿ ಸವಾಲು ನಡೆದಿಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿದಾರ ಸೋಮಶೇಖರನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿದೆ.
ಹಾಗೆಯೇ, ಅರ್ಜಿದಾರನಿಗೆ ವಕೀಲರ ನೆರವು ನೀಡಬೇಕು ಜೊತೆಗೆ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಇದನ್ನೂ ಓದಿ: ಕಬ್ಬು ಕಿತ್ತುಕೊಳ್ಳಲು ಹೋಗಿ ಟ್ರ್ಯಾಕ್ಟರ್ ಅಡಿ ಸಿಲುಕಿದ ಬಾಲಕ.. ರಕ್ಷಣೆಗೆ ಬರದೇ ಕೈಗೆ ಮೊಬೈಲ್ ಹಿಡಿದರಲ್ಲ ಜನ!
ಅರ್ಜಿದಾರ ಸೋಮಶೇಖರ ಪ್ರೀತಿಯ ಹೆಸರಲ್ಲಿ 14 ವರ್ಷ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಡಿ ಸಂತ್ರಸ್ತೆಯ ಸೋದರ 2014ರಲ್ಲಿ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 506, 323 ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 5, 6ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ 2018ರ ಜನವರಿ 27ರಂದು 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೂ ಮುನ್ನ ವಿಚಾರಣೆ ವೇಳೆ ಆರೋಪಿಗೆ ಸಾಕ್ಷ್ಯಗಳ ಪಾಟಿ ಸವಾಲಿಗೆ ಅವಕಾಶ ನೀಡಿದ್ದರೂ ಆರೋಪಿ ಪರ ವಕೀಲರು ಹಾಜರಾಗಿರಲಿಲ್ಲ.