ಬೆಂಗಳೂರು: ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್‌ನ 18ನೇ ಪಂದ್ಯಕ್ಕೆ ರಾಜಧಾನಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಟೂರ್ನಿಯಲ್ಲಿ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯ ಸಾಧಿಸಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರೆ, ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಉಭಯ ತಂಡಗಳು ಇಂದು ಚಿನ್ನಸ್ವಾಮಿಯಲ್ಲಿ ಸೆಣಸಾಡಲಿದ್ದು, ಕ್ರಿಕೆಟ್ ಅಭಿಮಾನಿಗಳ ಕಾತರವನ್ನ ಮತ್ತಷ್ಟು ಹೆಚ್ಚಿಸಿದೆ.
ಆಸ್ಟ್ರೇಲಿಯಾ Vs ಪಾಕ್: ಈವರೆಗೂ ಏಕದಿನ ಮಾದರಿಯಲ್ಲಿ 107 ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಕಾಂಗರೂಗಳು 69 ಪಂದ್ಯಗಳಲ್ಲಿ ಗೆದ್ದು ಬೀಗಿದ್ದಾರೆ. ಪಾಕಿಸ್ತಾನ 34 ಪಂದ್ಯಗಳಲ್ಲಿ ಜಯ ದಾಖಲಿಸಿದೆ.
ಚೇಸಿಂಗ್ಗೆ ಸಹಕಾರಿ ಎನಿಸಿರುವ ಚಿನ್ನಸ್ವಾಮಿ ಮೈದಾನದಲ್ಲಿ ಇದುವರೆಗೂ 38 ಏಕದಿನ ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡ 14 ಬಾರಿ ಜಯ ಸಾಧಿಸಿದರೆ 20 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಆಯ್ಧುಕೊಂಡಿರುವ ತಂಡ ಗೆಲುವು ಸಾಧಿಸಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ದಾಖಲಿಸಿದ್ದ (383/6) ಗರಿಷ್ಠ ದಾಖಲೆಯಾದರೆ, ದ.ಆಫ್ರಿಕಾ ವನಿತೆಯರ ವಿರುದ್ಧ ಭಾರತದ ವನಿತೆಯರು ದಾಖಲಿಸಿದ್ದ 114 ರನ್ ಕನಿಷ್ಠ ಮೊತ್ತವಾಗಿದೆ. ಇನ್ನು 2011ರ ವಿಶ್ವಕಪ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ 3 ವಿಕೆಟ್ ಬಾಕಿ ಇರುವಂತೆಯೇ 328 ರನ್ ಕಲೆ ಹಾಕಿದ್ದ ಐರ್ಲೆಂಡ್ ತಂಡ ಚಿನ್ನಸ್ವಾಮಿ ಮೈದಾನದಲ್ಲಿ ಗರಿಷ್ಠ ರನ್ ಚೇಸ್ ಮಾಡಿದ್ದ ದಾಖಲೆ ಹೊಂದಿದೆ.
ಉಭಯ ತಂಡಗಳಿಗೆ ಮಹತ್ವದ ಪಂದ್ಯ: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನಕ್ಕೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಈಗಾಗಲೇ ಮೂರರ ಪೈಕಿ ಒಂದನ್ನು ಮಾತ್ರ ಗೆದ್ದಿರುವ ಆಸ್ಟ್ರೇಲಿಯಾದ ಪ್ಲೇ ಆಫ್ ಹಾದಿ ಸರಳವಾಗಲು ಇಂದಿನ ಪಂದ್ಯ ಗೆಲ್ಲಬೇಕಿದೆ. ಇನ್ನು ಪಾಕ್ ತಂಡ ಮೂರರಲ್ಲಿ ಒಂದು ಪಂದ್ಯ ಸೋತು, ಎರಡರಲ್ಲಿ ಗೆದ್ದಿದೆ. ನೆದರ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಪಾಕ್ ಗೆದ್ದರೂ ಉತ್ತಮ ರನ್‌ರೇಟ್ ಕಲೆಹಾಕಿರಲಿಲ್ಲ. ಭಾರತದ ಎದುರು ಹೀನಾಯ ಸೋಲು ಅನುಭವಿಸಿದ್ದು, -0.137 ರನ್ ರೇಟ್ ಹೊಂದಿದೆ. ಆದ್ದರಿಂದ ಅಂಕದ ಜೊತೆಗೆ ರನ್‌ರೇಟ್ ಉತ್ತಮ ಪಡಿಸಿಕೊಳ್ಳುವ ಒತ್ತಡದಲ್ಲಿ ಪಾಕ್ ಇದೆ.
ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಸಜ್ಜು: ವಿಶ್ವಕಪ್ ಟೂರ್ನಿ ಅ.5 ರಂದು ಆರಂಭವಾಗಿದ್ದು, ಇಂದು 18ನೇ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯಲಿದೆ. ಪ್ರಸಕ್ತ ಟೂರ್ನಿಯಲ್ಲಿ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಇನ್ನು ಈ ವಿಶ್ವಕಪ್‌ನ ಐದು ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಸಂಭಾವ್ಯ ತಂಡ: - ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಮಾರ್ಕಸ್ ಸ್ಟೋಯ್ನಿಸ್, ಗ್ಲೇನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿ.ಕೀ), ಪ್ಯಾಟ್ ಕಮ್ಮಿನ್ಸ್ (ನಾ), ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್, ಆ್ಯಡಂ ಜಂಪಾ.
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಇಮಾಮ್ ಉಲ್ ಹಕ್, ಬಾಬರ್ ಅಜಂ (ನಾ), ಮೊಹಮ್ಮದ್ ರಿಜ್ವಾನ್ (ವಿ.ಕೀ), ಸೌದ್ ಶಕೀಲ್, ಇಫ್ತಿಕಾರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಹೀನ್ ಅಫ್ರಿಧಿ, ಹ್ಯಾರೀಸ್ ರೌಫ್.
ಇದನ್ನೂ ಓದಿ: ವಿರಾಟ್ ಭರ್ಜರಿ ಶತಕ.. ಹೆಂಡತಿ ಅನುಷ್ಕಾ, ಸಹೋದರಿ ಭಾವನಾ ,ಬ್ರದರ್ ವಿಕಾಸ್ ಕೊಹ್ಲಿ ಹೇಳಿದ್ದಿಷ್ಟು!
ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ'ದಿಂದ ವಿಶೇಷ ವ್ಯವಸ್ಥೆ