ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಹಾಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇದೇ ಮೇ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ.
ಜೇಷ್ಠತೆ ಆಧಾರದಲ್ಲಿ ವಂದಿತಾ ಶರ್ಮಾ ಹೆಸರು ಮುಂಚೂಣಿಯಲ್ಲಿತ್ತು. ನಿರೀಕ್ಷೆಯಂತೆ ಸರ್ಕಾರ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ವಂದಿತಾ ಶರ್ಮಾ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವಂದಿತಾ ಶರ್ಮಾ 1986ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ವಂದಿತಾ ಶರ್ಮಾ ಎರಡು ವರ್ಷಗಳ ಸೇವಾವಧಿ ಹೊಂದಿದ್ದಾರೆ.
ನಾಲ್ಕನೇ ಮಹಿಳಾ ಸಿಎಸ್: ವಂದಿತಾ ಶರ್ಮಾ ಅವರು ರಾಜ್ಯದ ನಾಲ್ಕನೇ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ ಮಹಿಳಾ ಅಧಿಕಾರಿಯಾಗಿದ್ದಾರೆ. 2000ರಲ್ಲಿ ತೆರೆಸಾ ಭಟ್ಟಾಚಾರ್ಯ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ 11 ತಿಂಗಳು ಸೇವೆ ಸಲ್ಲಿಸಿದ್ದರು. ನಂತರ 2006ರಲ್ಲಿ ಡಾ.ಮಾಲತಿ ದಾಸ್ ಕೇವಲ ಮೂರು ತಿಂಗಳು ಸೇವೆ ಸಲ್ಲಿಸಿದ್ದರು. ಮೂರನೇ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾ ಕಾರ್ಯನಿರ್ವಹಿಸಿದ್ದರು.
ಕಳೆದ ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಯವರಿಗೆ ಅಧಿಕಾರ ನೀಡಲಾಗಿತ್ತು. ಮುಖ್ಯ ಕಾರ್ಯದರ್ಶಿ ಹುದ್ದೆಗೆ 9 ಮಂದಿ ಐಎಎಸ್ ಅಧಿಕಾರಿಗಳು ರೇಸ್ನಲ್ಲಿ ಇದ್ದರು. ವಂದಿತಾ ಶರ್ಮಾ ಜೊತೆಗೆ ಅವರ ಪತಿ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಹಾಗೂ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಹೆಸರು ಮುಂಚೂಣಿಯಲ್ಲಿತ್ತು. ಇದರ ಜೊತೆಗೆ ಪಟ್ಟಿಯಲ್ಲಿ ಶಾಲಿನಿ ರಜನೀಶ್, ಅಜಯ್ ಸೇತ್, ರಮಣರೆಡ್ಡಿ, ರಾಕೇಶ್ ಸಿಂಗ್, ಜಿ.ಕುಮಾರ್ ನಾಯ್ಕ್ ಮತ್ತು ಗೌರವ ಗುಪ್ತ ಹೆಸರುಗಳೂ ಇದ್ದವು.