ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್ ಕಂಪೆನಿಯಿಂದ ಕೋಟ್ಯಂತರ ರು.ಗಳ ಅವ್ಯವಹಾರದ ಆರೋಪದಲ್ಲಿ ಏಳನೇ ಆರೋಪಿಯಾಗಿದ್ದ ಐಎಎಸ್ ಅಧಿಕಾರಿ ಡಾ. ಜಿ ಸಿ ಪ್ರಕಾಶ್ ಅವರಿಗೆ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮೈಸೂರಿನ ಪ್ರಾದೇಶಿಕ ಆಯುಕ್ತರಾಗಿರುವ ಪ್ರಕಾಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಬಿ.ಜಯಂತ ಕುಮಾರ್ ಅವರು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಒಂದು ಲಕ್ಷ ರು.ಗಳ ವೈಯಕ್ತಿಕ ಬಾಂಡ್, ಒಬ್ಬರ ಭದ್ರತೆ ನೀಡಬೇಕು. ಅಲ್ಲದೆ, ಮುಂದಿನ ಮೂರು ವಾರಗಳಲ್ಲಿ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರರು ನಾಪತ್ತೆಯಾಗುವಂತಿಲ್ಲ. ಸಾಕ್ಷ್ಯ ನಾಶ ಮಾಡುವಂತಿಲ್ಲ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಅಗತ್ಯವೆನಿಸಿದಾಗ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರರು ತಿಂಗಳಲ್ಲಿ ಒಂದು ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಿ, ಸಹಿ ಹಾಕಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಅರ್ಜಿದಾರರ ಪರ ವಾದ : ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2019ರ ಆಗಸ್ಟ್ 6ರಂದು ಪ್ರಕಾಶ್ ಅವರು ಬಿಡಿಎ ಆಯುಕ್ತರಾಗಿ ನೇಮಕವಾಗಿದ್ದು, 2020ರ ಜೂನ್ 3ರವರೆಗೆ 10 ತಿಂಗಳು ಮಾತ್ರ ಹುದ್ದೆಯಲ್ಲಿದ್ದರು. ಬಿಡಿಎ ಆಯುಕ್ತರಾಗಿ ನೇಮಕವಾಗುವುದಕ್ಕೂ ಮುನ್ನ ಐದನೇ ಆರೋಪಿಯಾಗಿರುವ ಚಂದ್ರಕಾಂತ್ ರಾಮಲಿಂಗಂಗೆ ಅವರಿಗೆ ವಸತಿ ಯೋಜನೆಗೆ ಸಂಬಂಧಿಸಿದ ಕಾರ್ಯಾದೇಶ ನೀಡಲಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರಾಗಿದ್ದಾಗ ಯಾವುದೇ ನಿರ್ಧಾರವನ್ನು ಪ್ರಕಾಶ್ ಅವರು ಮಾಡಿಲ್ಲ. ಹೀಗಾಗಿ, ಅಧಿಕೃತ ಸ್ಥಾನದ ದುರ್ಬಳಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಎಫ್‌ಐಆರ್‌ನಲ್ಲಿನ ಆರೋಪಗಳು ಸಾಮಾನ್ಯವಾಗಿವೆ. ಸ್ಥಾನ ದುರ್ಬಳಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕರಣ ನಡೆದಿಲ್ಲ. ಇತರೆ ಆರೋಪಿಗಳ ಜೊತೆ ಸೇರಿ ಪ್ರಕಾಶ್ ಅವರು ಪಿತೂರಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಜಾಮೀನು ಮಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ : ಟ್ವಿಟರ್ ಖಾತೆ ರದ್ದು ಪ್ರಶ್ನಿಸಿದ್ದ ಅರ್ಜಿ: ಮುಚ್ಚಿದ ಲಕೋಟೆಯಲ್ಲಿನ ಮಾಹಿತಿ ಪರಿಶೀಲಿಸಿದ ಹೈಕೋರ್ಟ್