ಬೆಂಗಳೂರು: ಟೀಕೆ ಟಿಪ್ಪಣಿಗಳನ್ನು ಮಾಡದೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ನಾವು ಚುನಾವಣೆ ಎದುರಿಸುತ್ತಿದ್ದು, ಮತದಾನ ಮುಗಿದ ದಿನವೇ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮೈತ್ರಿ ಸರ್ಕಾರ ಪತನದ ಸುಳಿವನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ ಸದಾನಂದಗೌಡ ನೀಡಿದ್ದಾರೆ.
ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಯಾರ ವಿರುದ್ಧವೂ ಟೀಕೆ, ಆರೋಪ ಮಾಡದೆ ಅಭಿವೃದ್ಧಿ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮಪ್ರೋಗ್ರೆಸ್ ಕಾರ್ಡ್ ಜನರ ಮುಂದೆ ಇಟ್ಟಿದ್ದು, ಅದನ್ನು ಮೌಲ್ಯಮಾಪನ ಮಾಡಿ ಜನ ಆಶೀರ್ವಾದ ಮಾಡಲಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ನಾನು ಗೆಲ್ಲುತ್ತೇನೆ ಇದು ಅತಿಯಾದ ಆತ್ಮವಿಶ್ವಾಸ ಅಲ್ಲ ವಾಸ್ತವ ಎಂದರು.
ಮೈತ್ರಿ ಸರ್ಕಾರ ಪತನ:
ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನದ ಸನಿಹದಲ್ಲಿದೆ. ಮತದಾನ ಮುಗಿದ ದಿನವೇ ಏನು ಬೇಕಾದರೂ ಆಗಬಹುದು, ನಾನು ಭವಿಷ್ಯ ನುಡಿಯಲ್ಲ, ವಾಸ್ತವವನ್ನು ಹೇಳುತ್ತಿದ್ದೇನೆ. ಬೇರೆ ಬೇರೆ ಕಡೆ ಆಗ್ತಿರೋ ವಿದ್ಯಮಾನ ನೋಡ್ತಿದ್ದರೆ ಏನ್ ಬೇಕಾದರು ಆಗುತ್ತೆ ಹಾಸನ, ಮಂಡ್ಯ, ತುಮಕೂರು ಕಡೆ ನೋಡ್ತಿದ್ದೇವೆ ಜಂಟಿ ಪ್ರಚಾರಗಳಲ್ಲೂ ಒಟ್ಟಿಗೆ ಹೋಗ್ತಿಲ್ಲ ಮೈತ್ರಿಯಲ್ಲಿ ಯಾವಾಗ ಏನ್ ಬೇಕಾದರೂ ಆಗಬಹುದು. ನಾವಾಗಿಯೇ ಯಾವುದಕ್ಕೂ ಕೈ ಹಾಕಲ್ಲ. ಆದರೆ ಸರ್ಕಾರ ಬಿದ್ದರೆ 104 ಸ್ಥಾನ ಪಡೆದಿರುವ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಚುನಾವಣೆ ನಂತರ ಸರ್ಕಾರ ರಚನೆ ಸುಳಿವು ನೀಡಿದರು.
ಸುಮಲತಾಗೆ ಬಿಜೆಪಿ ವರ:
ಸುಮಲತಾ ಪರ ಬಿಜೆಪಿ ಬೆಂಬಲ ವರವೋ ಶಾಪವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ನಾವು ವರ ಕೊಡ್ಲಿಕ್ಕೇ ಇದ್ದೇವೆ. ಶಾಪ ಕೊಡುವುದಿಲ್ಲ ಒಬ್ಬರನ್ನ ಮಣಿಸಿ ಮತ್ತೊಬ್ಬರ ಜೊತೆ ಮಲ್ಲಯುದ್ಧ ಸಾರ್ತೆವೆ ಆದರೆ ಸದಾನಂದಗೌಡರನ್ನ ಬೆಂಗಳೂರು ಉತ್ತರದಿಂದ ಸುಳ್ಯಕ್ಕೆ ಕಳಿಸೋ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ. ಅವರಿಗೆ ಸ್ವಲ್ಪ ಕಾಮನ್ ಸೆನ್ಸ್ ಇರ್ಬೇಕು. ನಾನು ಮುಖ್ಯಮಂತ್ರಿ ಆಗಿದ್ದವ ರಾಜ್ಯದ ಎಲ್ಲಿಂದ ಬೇಕಾದರೂ ಚುನಾವಣೆಗೆ ನಿಲ್ಲಬಹುದು ಎನ್ನುವ ತಿಳಿವಳಿಕೆ ಅವರಿಗಿಲ್ಲವೇ? ಇದಕ್ಕೆ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಆಗ ಯಾರು ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.
.