ಬೆಂಗಳೂರು : ಯಡಿಯೂರಪ್ಪರನ್ನು ದೂರ ಇಟ್ಟು ಏನೂ ಮಾಡಲು ಸಾಧ್ಯವಿಲ್ಲ. ಬಸವರಾಜ್ ಬೊಮ್ಮಾಯಿಗೆ ಯಡಿಯೂರಪ್ಪರ ಬೆಂಬಲವೂ ಇದೆ. ಹಾಗಾಗಿ, ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿಯಾದ ಬಳಿಕ ಮಾತನಾಡಿದ ಅವರು, ಹೈಕಮಾಂಡ್ ಬೊಮ್ಮಾಯಿಗೆ ಆಶೀರ್ವಾದ ಮಾಡಿದ್ದಾರೆ. ಮಧ್ಯಂತರ ಚುನಾವಣೆಗೆ ಹೋಗಬೇಕೆಂಬ ಹಠ ಯಾರಿಗೂ ಇದ್ದಂತಿಲ್ಲ. ನಮಗೂ ಚುನಾವಣೆಗೆ ಹೋಗಬೇಕೆಂಬ ಆತುರ ಇಲ್ಲ. ಈ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನಾನು ಸಪೋರ್ಟ್ ಮಾಡುತ್ತೇನೆ. ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಆಸೆ ನಮಗೆ ಇಲ್ಲ. ಅವಧಿಗೂ ಮೊದಲೇ ಚುನಾವಣೆ ಬರಲ್ಲ ಎಂದು ತಿಳಿಸಿದರು.
ವಯಸ್ಸಿಗಿಂತ ಶ್ರದ್ಧೆ, ಹೋರಾಟದ ಕಿಚ್ಚು ಮುಖ್ಯ : ರಾಜಕಾರಣದಲ್ಲಿ ವಯಸ್ಸು ಮುಖ್ಯನಾ ಎಂಬ ಪ್ರಶ್ನೆಗೆ ಮಹಾಭಾರತದ ಪ್ರಸಂಗ ನೆನಪಿಸಿದ ಹೆಚ್‌ಡಿಡಿ, ವಯಸ್ಸಿಗಿಂತ ಹೆಚ್ಚಾಗಿ ಮನಸ್ಸಿನಲ್ಲಿ ಶ್ರದ್ಧೆ,ಹೋರಾಟದ ಕಿಚ್ಚು ಮುಖ್ಯ. ವಯಸ್ಸಾದರೂ ಹೋರಾಟ ಮನೋಭಾವನೆ ಇರಬೇಕು. ಭೀಷ್ಮನಿಗೆ ವಯಸ್ಸಾದರೂ 10 ದಿನ ಯುದ್ಧ ಮಾಡಿದ. ಕರ್ಣ ಒಂದು ದಿನ ಯುದ್ಧ ಮಾಡಿದ ಎಂದ ಅವರು, ರಾಜಕಾರಣಕ್ಕೂ ವಯಸ್ಸಿಗೂ ಸಂಬಂಧ ಇಲ್ಲ ಎಂದು ತಿಳಿಸಿದರು.
ಯಡಿಯೂರಪ್ಪರನ್ನು ತೆಗೆಯಬೇಕು ಅಂತಾ ನಾವೇನು ಹೇಳಿರಲಿಲ್ಲ. ಕೇಂದ್ರದ ಬಿಜೆಪಿ ನಾಯಕರು 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಿರಲಿಲ್ಲ. ಯಡಿಯೂರಪ್ಪ ವಿಚಾರದಲ್ಲಿ ಅದು ವಿಶೇಷ ಸಂದರ್ಭ. ಈಗ ಅವರಿಂದ ರಾಜೀನಾಮೆಯನ್ನು ಪಡೆದುಕೊಂಡಿದ್ದಾರೆ. ಬಸವರಾಜ್ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ.
ಈ ಮೊದಲು ಯಡಿಯೂರಪ್ಪ, ಶೆಟ್ಟರ್, ಸದಾನಂದಗೌಡ ಅವಧಿಯಲ್ಲಿ ಸಚಿವರಾಗಿದ್ದಾರೆ. ಬಿಜೆಪಿಯಲ್ಲಿ ಅದಕ್ಕಿಂತಲೂ ಯಡಿಯೂರಪ್ಪ ಜೊತೆ ನಡೆದುಕೊಂಡ ರೀತಿ ನೋಡಿ ಕೊನೆಗೆ ಹೈಕಮಾಂಡ್ ಒಪ್ಪಿಕೊಂಡು ಅವಕಾಶ ನೀಡಿದೆ ಎಂದರು.
ಹಿಂದಿನದ್ದನ್ನು ಮೆಲುಕು ಹಾಕಿದ ಹೆಚ್‌ಡಿಡಿ : ಬಸವರಾಜ್ ಬೊಮ್ಮಾಯಿ ತಂದೆ, ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಮೆಲುಕು ಹಾಕಿದ ಹೆಚ್‌ಡಿಡಿ, ಎಸ್.ಆರ್ ಬೊಮ್ಮಾಯಿ, ಜೆ.ಹೆಚ್ ಪಟೇಲ್ ಎಲ್ಲರೂ ಅಗಲಿ ಹೋಗಿದ್ದಾರೆ ಎಂದು ಸ್ಮರಿಸಿದರು.
ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ : ಸಿದ್ದರಾಮಯ್ಯ ಜೊತೆ ಬಹಳ ಜನ ಹೋಗಿದ್ದಾರೆ. ಎಲ್ಲರೂ ಸಿಎಂ, ಮಂತ್ರಿಗಳು ಆಗಲು ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿಯಲ್ಲಿ ಹಲವರು ಜನತಾ ಪರಿವಾರದವರು ಇದ್ದಾರೆ. ಮಂತ್ರಿ ಮಂಡಲ ಭರ್ತಿ ಮಾಡುವುದು ನಮಗೆ ಸಂಬಂಧಿಸಿದಲ್ಲ. ಮಂತ್ರಿಯಾಗಲು ಒತ್ತಡಗಳು ಹೆಚ್ಚಿವೆ. ಕೆಲವರು ಮಂತ್ರಿಯಾದರೆ ಮಾತ್ರ ಕೆಲಸ ಮಾಡಲು ಸಾಧ್ಯವೆಂದುಕೊಂಡಿದ್ದಾರೆ. ಅದೇ ಕಾರಣಕ್ಕೆ ಸಚಿವ ಸ್ಥಾನಕ್ಕೆ ಒತ್ತಡಗಳು ಬರೋದು ಸಹಜ ಎಂದರು.
ಓದಿ: ಇಮೇಜ್ ಉಳಿಸಿಕೊಳ್ಳಲು ಬಿಎಸ್‌ವೈ ಹೊಸ ಗೇಮ್ ಪ್ಲಾನ್: ರಾಜ್ಯ ಪ್ರವಾಸಕ್ಕೆ ಹೊರಟ 'ರಾಜಾಹುಲಿ'
ಸಿದ್ದು ಹೇಳಿಕೆಗೆ ದೇವೇಗೌಡ ಪ್ರತಿಕ್ರಿಯೆ : ಸಿಎಂ ಬಿಎಸ್‌ವೈ ರಬ್ಬರ್ ಸ್ಟ್ಯಾಂಪ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷ ಬೆಳೆಯುತ್ತೆ ಅನ್ನೋ ಭಾವನೆಯಿಂದ ರಬ್ಬರ್ ಸ್ಟ್ಯಾಂಪ್ ಅಂತಾ ಹೇಳ್ತಾರೆ. ಅದು ಅವರ ಪಕ್ಷದ ಹೇಳಿಕೆ.
ಇಲ್ಲದಿದ್ದರೆ ವಿರೋಧ ಪಕ್ಷದ ನಾಯಕರಾಗಿ ಏನು ಹೇಳಿಲ್ಲ ಎಂದು ಕೊಳ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು. ಸಿದ್ದರಾಮಯ್ಯ ನನ್ನ ಶಿಷ್ಯ ಎಂದು ಹೇಳಲ್ಲ. ಅವರು ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಈಗ ಅವರು ನಾಯಕರು ಎಂದರು.