ಬೆಂಗಳೂರು: ಇಂದು ರಾತ್ರಿಯೊಳಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಜೆಪಿ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೇ 99 ರಷ್ಟು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಇದೇ ವೇಳೆ, ಮಾಜಿ ಸಿಎಂ ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಹೆಸರು ಪ್ರಕಟವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಘೋಷಣೆಯಾದ 189 ಸ್ಥಾನಗಳ ಪೈಕಿ ನಾವು 125-130 ಸ್ಥಾನಗಳನ್ನು ಗೆಲ್ಲುತ್ತೇವೆ. ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯ ಘೋಷಣೆಯಿಂದ ನಮಗೆ ಸಂತಸವಾಗಿದೆ. ಕರ್ನಾಟಕದಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟರ್ಗೆ ಬಹುತೇಕ ಟಿಕೆಟ್ ಸಿಗಲಿದೆ: ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಜೊತೆ ಮಾತನಾಡಿದ್ದು ಬಹುತೇಕ ಅವರಿಗೆ ಟಿಕೆಟ್ ಸಿಗಲಿದೆ. ಆದರೆ ಎಲ್ಲ ಅವಕಾಶ ಪಡೆದೂ ಹೊರಹೋಗುತ್ತೇನೆ ಎಂದರೆ ಲಕ್ಷ್ಮಣ ಸವದಿ ಅವರನ್ನು ತಡೆಯಲ್ಲ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಸಮಿತಿಗಳ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಕೇಂದ್ರದ ಸಂಸದೀಯ ಮಂಡಳಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದೆ. ಎಲ್ಲಿ ಯಾರಿಗೆ ಸಿಕ್ಕಿಲ್ಲವೋ ಬೇಸರವಿದೆಯೋ ಅಲ್ಲಿ ಅವರ ಜೊತೆ ಮಾತುಕತೆ ನಡೆಸುತ್ತೇವೆ. ಒಂದಿಬ್ಬರ ಹೊರತುಪಡಿಸಿ ಎಲ್ಲರೂ ಸಮಾಧಾನಿತರಾಗಿದ್ದಾರೆ. ಅಸಮಾಧಾನಿತರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಇಂದು ನಾಳೆ ಎಲ್ಲವೂ ಸರಿಯಾಗಲಿದೆ ಎಂದರು.
ಎಲ್ಲ ಅವಕಾಶ ಪಡೆದು ಅವರು ಹೊರಹೋಗುವುದು ಎಷ್ಟು ಸರಿ?: ಮಾಜಿ ಸಿಎಂ ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿದ್ದಾರೆ. ಅವರಿಗೆ ಪಕ್ಷ ನಿಶ್ಚಿತವಾಗಿ ಟಿಕೆಟ್ ಕೊಟ್ಟೆ ಕೊಡಲಿದೆ. ಅವರು ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ನಮ್ಮೆಲ್ಲರ ಅಪೇಕ್ಷೆ. ದೆಹಲಿ ಮುಖಂಡರ ಜೊತೆ ನಾನು ಈಗಷ್ಟೇ ಮಾತುಕತೆ ನಡೆಸಿದ್ದೇನೆ. ಲಕ್ಷ್ಮಣ ಸವದಿ ಅವರು ಎಲ್ಲ ಸ್ಥಾನಮಾನ ಕೊಟ್ಟ ಮೇಲೂ ಸಹ ಈ ರೀತಿ ತೀರ್ಮಾನ ತೆಗೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಅವರೇ ಅವಲೋಕನ ಮಾಡಿಕೊಳ್ಳಬೇಕು. ಅವರಿಗೆ ಯಾವುದೇ ಸ್ಥಾನಮಾನದ ಕೊರತೆ ಮಾಡಿಲ್ಲ. ಎಲ್ಲ ಅವಕಾಶವನ್ನು ಕೊಡಲಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಈಶ್ವರಪ್ಪ ಈಗಾಗಲೇ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆ. ನನ್ನ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ. ನನ್ನ ಪುತ್ರನಿಗೆ ಟಿಕೆಟ್ ಸಿಕ್ಕಿದೆ. ಇದೇ ರೀತಿ ಪುತ್ರರಿಗೆ ಟಿಕೆಟ್ ಕೇಳಿದ್ದವರಿಗೆ ಟಿಕೆಟ್ ಕೊಟ್ಟಿಲ್ಲ. ಯಡಿಯೂರಪ್ಪಗೆ ಒಂದು ಇತರರಿಗೆ ಒಂದು ನ್ಯಾಯವೇ ಎಂದು ಕೇಳುತ್ತಿದ್ದೀರಿ. ಕೇಂದ್ರದ ನಾಯಕರಿಗೆ ಈ ಪ್ರಶ್ನೆಯನ್ನ ನೀವು ಕೇಳಿದ್ದೀರಿ ಎಂದು ತಿಳಿಸುತ್ತೇನೆ ಎಂದು ಮಾಜಿ ಸಿಎಂ ಹಾಸ್ಯ ಚಟಾಕಿ ಹಾರಿಸಿದರು.
ಮುಂದೆ ಅವರಿಗೆ ಅವಕಾಶ ಸಿಗಲಿದೆ: ಹತ್ತರು ಬಾರಿ ಯೋಚನೆ ಮಾಡಿ ಕೇಂದ್ರದ ನಾಯಕರು ಸಮಾಲೋಚನೆ ಮಾಡಿ ಕೆಲ ಹಾಲಿಗಳ ಬದಲು ಹೊಸಬರಿಗೆ ಟಿಕೆಟ್ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಆದರೂ ಒಬ್ಬೊರಿಬ್ಬರಿಗೆ ಅಸಮಾಧಾನವಿದೆ. ಅವರನ್ನು ಕರೆದು ಮಾತುಕತೆ ನಡೆಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ. ಆದರೂ ಕೆಲವರು ಹೊರ ಹೋಗುವ ಅಪೇಕ್ಷೆ ಪಟ್ಟರೆ ಅದಕ್ಕೆ ವಿರೋಧ ಮಾಡಲು ಹೋಗುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಆದರೆ, ನಾವು ಪ್ರತಿಯೊಬ್ಬರನ್ನೂ ಕರೆದು ಮಾತುಕತೆ ನಡೆಸಲಿದ್ದೇವೆ. ಯಾವ ಕಾರಣಕ್ಕೆ ಟಿಕೆಟ್ ಕೈತಪ್ಪಿದೆ ಎಂದು ವಿವರಿಸುತ್ತಿದ್ದೇವೆ. ಮುಂದೆ ಅವರಿಗೆ ಅವಕಾಶ ಸಿಗಲಿದೆ ಎನ್ನುವ ಭರವಸೆಯನ್ನು ನೀಡುತ್ತೇವೆ ಎಂದು ಬಿಎಸ್ವೈ ಭರವಸೆ ನೀಡಿದರು.
ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ: ಈ ಬಾರಿಯ ಪಟ್ಟಿಯ ನಾವು ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬರಲು ಅನುಕೂಲ ಆಗಿದೆ. ನಮ್ಮನ್ನ ತಡೆಯುವ ಶಕ್ತಿ ಯಾರಿಗೂ ಇಲ್ಲ. ಕೆಲವರು ಗೊಂದಲದಿಂದ ಅಸಮಾಧಾನದಿಂದ ಪಕ್ಷ ಬಿಟ್ಟು ಹೋಗಬಹುದು. ಅವರು ಹೋಗೋದ್ರಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ನಾಳೆಯಿಂದ ನಾವೆಲ್ಲಾ ನಾಯಕರು ರಾಜ್ಯ ಪ್ರವಾಸ ಆರಂಭಿಸುತ್ತೇವೆ. ನಾಳೆಯಿಂದ ನಾಮಪತ್ರ ಕೂಡ ಸಲ್ಲಿಕೆ ಆರಂಭವಾಗಲಿದೆ. ನೂರಕ್ಕೆ ನೂರು ಸ್ಪಷ್ಟ ಬಹುಮತ ತರೋದು ನಿಶ್ಚಿತ ಎಂದರು.
ಪಕ್ಷ ಸೇರ್ಪಡೆ: ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾರವಾರ ಉಸ್ತುವಾರಿ ಡಾ. ರಾಜನಂದಿನಿ, ಮಾಜಿ ಅಥ್ಲೀಟ್ ತೀರ್ಥಾ ಇಸ್ಕಾ, ಕಾಂಗ್ರೆಸ್ ಮುಖಂಡರಾದ ಪುಟ್ಟಣ್ಣ ರತ್ನಾಕರ್, ಜಿಪಂ ಮಾಜಿ ಸದಸ್ಯ ರಮೇಶ್, ಭೈರಪ್ಪ ನಾಗರಾಜ್ ಬಿಜೆಪಿ ಪಕ್ಷ ಸೇರ್ಪಡೆಯಾದರು. ಹಿರಿಯ ನಾಯಕ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ನಂತರ ಮಾತನಾಡಿದ ಯಡಿಯೂರಪ್ಪ, ನಾಡು ಕಂಡ ಅಪರೂಪದ ರಾಜಕಾರಣಿ ಸಮಾಜವಾದಿ ಹಿನ್ನಲೆಯ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಇಂದು ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ಹಿಂದುಳಿದ ವರ್ಗದಿಂದ ಬಂದಿರುವ ಅವರು ವೈದ್ಯರಾಗಿದ್ದು, ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಸಾಕಷ್ಟು ಬಲ ಬರಲಿದೆ. ಸಾಗರ, ಸೊರಬ ಸೇರಿ ಜಿಲ್ಲೆಯಲ್ಲಿ ಬಲ ಬರಲಿದೆ. ಅಭ್ಯರ್ಥಿಗಳು ಗೆಲ್ಲಲು ದೊಡ್ಡ ಶಕ್ತಿ ಬಂದಿದೆ. ನಮ್ಮ ಸರ್ಕಾರ ಬಂದ ನಂತರ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಲಾಗುತ್ತದೆ ಎಂದರು.
ತೀರ್ಥಾ ಇಸ್ಕಾ ಟೆನ್ನಿಸ್ ಅಂತಾರಾಷ್ಟ್ರೀಯ ಪಟು, ಇಬ್ಬರ ಜೊತೆ ಇತರರು ಬಿಜೆಪಿ ಸೇರುತ್ತಿರುವುದರಿಂದ ಜಿಲ್ಲೆಯಲ್ಲಿ ದೊಡ್ಡ ಶಕ್ತಿಯಾಗಲಿದೆ. ಜಿಲ್ಲೆಯ ಎಲ್ಲ ಕ್ಷೇತ್ರ ಗೆಲ್ಲಲು ಸಹಕಾರಿಯಾಗಲಿದೆ. ಎಲ್ಲರಿಗೂ ಸ್ವಾಗತ ಎಂದರು.
ಇದನ್ನೂ ಓದಿ : ಆತುರದ ನಿರ್ಧಾರ ಬೇಡ.. ಪಕ್ಷದಲ್ಲಿ ಉನ್ನತ ಭವಿಷ್ಯವಿದೆ: ಸವದಿಗೆ ಸಿಎಂ ಕಿವಿ ಮಾತು