ಬೆಂಗಳೂರು : ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಗರ್ಭಿತವಾಗಿ ನಡೆಸುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿದೆ. ಪ್ರಸಕ್ತ ಅಕ್ಷರ ಸಮ್ಮೇಳನವು ಜನ ಸಾಮಾನ್ಯ ಕನ್ನಡಿಗರ ಜಾತ್ರೆಯಾಗಬೇಕು. ಪ್ರತಿ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಬೇಕು ಎನ್ನುವ ಅಭಿಲಾಷೆಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯರಂತೆ ಹಾವೇರಿಯ ಜನ ಸಾಮಾನ್ಯರ ಮನೆಯಲ್ಲಿ ವಾಸ್ತವ್ಯ ಹೂಡುವ ಬಗ್ಗೆ ತೀರ್ಮಾನಿಸಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಎನ್ನುವ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿರುವಾಗ ʻಮನೆ-ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುʼ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ನೂರಾರು ಜನರ ಮನೆಗೆ ತಾವು ಭೇಟಿ ಕೊಟ್ಟಿದ್ದು, ಈ ಮೂಲಕ ಪರಿಷತ್ತಿನ ಧ್ಯೇಯೋದ್ದೇಶವನ್ನು ಜನರ ಮನೆಯಂಗಳಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 2023ರ ಜನವರಿ 4 ರಿಂದ 8ರ ವರೆಗೆ ಹಾವೇರಿಯಲ್ಲಿ ವಾಸ್ತವ್ಯ ಮಾಡಲಿದ್ದು, ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಇರುವ ಅಜ್ಜಯ್ಯನ ಗುಡಿಯ ಸುತ್ತಮುತ್ತಲಿನ ಯಾವುದಾದರೂ ಒಂದು ಮನೆಯಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿರುವೆ. ಹಾವೇರಿ ತಮ್ಮ ತವರೂರು, ಅಲ್ಲಿನ ಯಾವುದೇ ಮನೆಯಲ್ಲಿ ಇದ್ದರೂ ಅದು ತನ್ನ ಮನೆಯೇ ಎಂದು ಭಾವಿಸಿದ್ದೇನೆ ಎಂದು ಜೋಶಿ ಹೇಳಿದ್ದಾರೆ.
ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಲು ಇಷ್ಟ: ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಲು ಇಷ್ಟಪಡುವುದರಿಂದ ಯಾವುದೇ ವಿಶೇಷ ಸೌಲಭ್ಯವನ್ನು ಬಯಸದೆ, ಹಾವೇರಿಯ ಜನರ ಮನೆಯಲ್ಲಿ ವಾಸ್ತವ್ಯ ಮಾಡಿ ಜನರಿಗೆ ಹತ್ತಿರವಾಗಿರಬೇಕು ಎಂಬ ಅಪೇಕ್ಷೆ ನನ್ನದು. ಯಾವುದೇ ಹಮ್ಮನ್ನು ಇಟ್ಟುಕೊಳ್ಳದೆ ಸಾಮಾನ್ಯವಾಗಿ ದಿನ ನಿತ್ಯದ ಜೀವನ ನಡೆಸುವಂತೆ ಸಮ್ಮೇಳನದ ಸಂದರ್ಭದಲ್ಲಿ ಸ್ಥಳೀಯ ಯಾವುದಾದರೂ ಒಂದು ಮನೆಯಲ್ಲಿ ವಾಸ್ತವ್ಯ ಮಾಡುವ ಇಂಗಿತವಿದೆ. ಅದಕ್ಕಾಗಿ ಹಾವೇರಿಯಲ್ಲಿ ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಇರುವ ಅಜ್ಜಯ್ಯನ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಇರುವ ಯಾವುದಾದರೂ ಮನೆಯವರು ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಿಲು ಇಚ್ಛಿಸುವವರು ತಮ್ಮ ಮನೆಯ ವಿಳಾಸವನ್ನು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.
ದಿನಂಪ್ರತಿ ತಯಾರಿಸುವ ಆಹಾರವನ್ನು ಸೇವನೆ : ತಾವು ವಾಸ್ತವ್ಯ ಮಾಡುವ ಮನೆಯಲ್ಲಿ ದಿನಂಪ್ರತಿ ತಯಾರಿಸುವ ಆಹಾರವನ್ನು ಸೇವಿಸುತ್ತೇನೆ ಹಾಗೂ ಯಾವುದೇ ರೀತಿಯ ವಿಶೇಷ ಭೋಜನ, ಸವಲತ್ತು ಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲ. ಸಮ್ಮೇಳನ ನಡೆಯುವ ಸ್ಥಳಕ್ಕೆ ನಡೆದುಕೊಂಡೆ ಹೋಗುವ ವ್ಯವಸ್ಥೆಗೆ ನನ್ನ ಆದ್ಯತೆ. ಹಾವೇರಿಯಲ್ಲಿ ನಡೆಯುವ ಅಕ್ಷರ ಜಾತ್ರೆಯನ್ನು ಸರಳತೆಯ ಕನ್ನಡದ ಅಸ್ಮಿತೆಯ ಸಮ್ಮೇಳನವನ್ನಾಗಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ವಯಂ ಸೇವಕನಾಗಿ ಕೆಲಸ ಮಾಡುವೆ : ನಾಡೋಜ ಡಾ.ಮಹೇಶ ಜೋಶಿ