ಬೆಂಗಳೂರು :ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಪರ ಕಾಂಗ್ರೆಸ್ ಹಾಗೂ ಜೆಡಿಎಸ್ನ ಕೆಲ ಕಾರ್ಯಕರ್ತರು ಈಗಾಗಲೇ ಜೈ ಎಂದಿದ್ದಾರೆ. ಈಗ ಬಿಜೆಪಿಯೂ ಸಹ ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅಂಬರೀಶ್ಗೆ ಬಹಿರಂಗವಾಗೇ ಬೆಂಬಲ ಘೋಷಿಸಿದೆ. ಬಿಜೆಪಿಯಿಂದಲೂ ಬೆಂಬಲ ವ್ಯಕ್ತವಾಗಿದ್ದಕ್ಕೆ ಸುಮಲತಾ ಸಂತಸ ವ್ಯಕ್ತಪಡಿಸಿದ್ದಾರೆ.
ಅಂಬರೀಶ್ ನಾಲ್ಕನೇ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಬೆಂಬಲ ಸಿಕ್ಕಿರುವುದು ನನಗೆ ಇನ್ನಷ್ಟು ಶಕ್ತಿ ಬಂದಿದೆ. ಬಿಜೆಪಿ ನಾಯಕರಿಗೆ ತುಂಬು ಹೃದಯದ ಧನ್ಯವಾದಗಳು. ಬಿಜೆಪಿ ನಾಯಕರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ. ಬೆಜೆಪಿ ಬೆಂಬಲ ಸಿಗುವ ನಿರೀಕ್ಷೆ ಇತ್ತು. ಅಲ್ಲದೇ ಮಂಡ್ಯದಲ್ಲಿ ಇನ್ಮೇಲೆ ನೇರ ಕದನ ನಡೆಯಲಿದೆ ಎಂದರು.
ಮಂಡ್ಯದಲ್ಲಿ ನನಗೆ ಕಾಂಗ್ರೆಸ್ ಮುಖಂಡರ ಬೆಂಬಲವೂ ಇದೆ. ಅವರೆಲ್ಲ ನನ್ನ ಪರ ಇದ್ದಾರೆ ಎಂದು ಕೆಲವರನ್ನು ಉಚ್ಛಾಟನೆ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಂಡರೂ ಕಾಂಗ್ರೆಸ್ ಮುಖಂಡರು ನನ್ನ ಪರವಾಗಿ ಇರ್ತಾರೆ ಅಂತಾ ಸಮಲತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದೇ ವೇಳೆಸಚ್ಚಿದಾನಂದ ಉಚ್ಛಾಟನೆಗೆ ಪರೋಕ್ಷವಾಗಿ ಕಾಂಗ್ರೆಸ್ಗೂ ಸುಮಲತಾ ಟಾಂಗ್ ಕೊಟ್ಟಿದ್ದಾರೆ.
ಬೂತ್ ಮಟ್ಟದ ಮತದಾರರನ್ನು ಸೆೆಳೆಯಲು ಪ್ಲಾನ್ ಮಾಡಿಕೊಂಡಿದ್ದೇವೆ. ಇದಕ್ಕಾಗಿ ನಮ್ಮ ಅಭಿಮಾನಿಗಳ ತಂಡವನ್ನೂ ರಚಿಸಿದ್ದೇವೆ. ಅಲ್ಲದೇ ಮಹಿಳೆಯರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು ಸುಮಲತಾ ಅಂಬರೀಶ್.ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಕಲ್ಲು ತೂರಾಟದಿಂದ ದರ್ಶನ್ ಹೆದರಲ್ಲ. ನಾನು ದರ್ಶನ್ಗೆ ಫೋನ್ ಮಾಡಿದ್ದೆ. ದರ್ಶನ್ ಡೋಂಟ್ ವರಿ ಮದರ್ ಇಂಡಿಯಾ ಎಂದು ನನಗೇ ಧೈರ್ಯ ತುಂಬಿದರು ಎಂದು ಹೇಳಿದರು.