ಬೆಂಗಳೂರು: ಎರಡು ದಿನ ಸುದೀರ್ಘವಾಗಿ ಪಕ್ಷ ಸಂಘಟನೆ ಸಂಬಂಧ ಚರ್ಚೆ ನಡೆಸಿದ್ದೇನೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದರು.
ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಾಕಷ್ಟು ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದೇನೆ. ಜೊತೆಗೆ ಪಕ್ಷ ಬಲವರ್ಧನೆ ಕುರಿತು ಮೀಟಿಂಗ್ ಮಾಡಿದ್ದೀನಿ. ಮುಖ್ಯವಾಗಿ ಬೆಂಗಳೂರು ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ. ಏಕೆಂದರೆ ನಗರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದರ ವಿರುದ್ಧವಾಗಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಹೋರಾಟ ಮಾಡ್ತಿದೆ. ಬಿಬಿಎಂಪಿ ಚುನಾವಣೆ ವಿಚಾರ ಕೋರ್ಟ್ನಲ್ಲಿ ಇದೆ. ಯಾವುದೇ ಸಮಯದಲ್ಲೂ ಚುನಾವಣೆ ಘೋಷಣೆ ಆಗಬಹುದು. ಅದಕ್ಕಾಗಿ ನಾವು ಸಜ್ಜಾಗುತ್ತೇವೆ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡುರಾವ್ ಮಾತನಾಡಿ, ಪಕ್ಷ ಸಂಘಟನೆ ಕುರಿತು ಸುರ್ಜೇವಾಲಾ ಜೊತೆ ಚರ್ಚಿಸಿದ್ದೇನೆ. ಕಾಂಗ್ರೆಸ್ ಪಕ್ಷ ಜಾತಿ ಪಾಲಿಟಿಕ್ಸ್ ಮಾಡಲ್ಲ. ಅಹಿಂದ ಸಮಾವೇಶ ಉಹಾಪೊಹ. ಆ ಬಗ್ಗೆ ಸಿದ್ದರಾಮಯ್ಯ ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಸಮಾವೇಶಗಳನ್ನ ಪಕ್ಷದ ಚೌಕಟ್ಟಿನಲ್ಲಿ ಮಾಡ್ತಾರೆ ಅಷ್ಟೇ ಎಂದರು.
ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಚೆನ್ನಾಗಿಯೇ ಇದೆ. ನಮ್ಮಲ್ಲಿ ಗೊಂದಲಗಳಿಲ್ಲ. ಆದ್ರೆ ಬಿಜೆಪಿ ಎಐಡಿಎಂಕೆ ನಡುವೆ ಸಾಕಷ್ಟು ಗೊಂದಲಗಳಿವೆ. ಶಶಿಕಲಾ ಅವರು ಪಾಲಿಟಿಕ್ಸ್ನಲ್ಲಿ ಮತ್ತೆ ಸಕ್ರಿಯರಾಗಿರೋದು ಎಐಡಿಎಂಕೆಯಲ್ಲೇ ಗೊಂದಲ ಸೃಷ್ಟಿಸಿದೆ ಎಂದರು.
ಡಿಕೆಶಿ ಭೇಟಿ, ಚರ್ಚೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಇಂದು ಸಂಜೆ ರಣದೀಪ್ ಸುರ್ಜೆವಾಲಾರನ್ನು ಭೇಟಿಯಾಗಿ ಸಮಾಲೋಚಿಸಿದರು. ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆದ ಚರ್ಚೆಯ ಕುರಿತು ಉಭಯ ನಾಯಕರು ಈ ಸಂದರ್ಭ ಸಮಾಲೋಚಿಸಿದರು.