ಬೆಂಗಳೂರು: ಕನ್ನಡಪರ ಹೋರಾಟದಲ್ಲಿ ಗುರುತಿಸಿಕೊಂಡಿರುವ ವಾಟಾಳ್ ನಾಗರಾಜ್ ಅವರು ಇಂದು ಮಹಾಲಕ್ಷ್ಮಿಲೇಔಟ್ನಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಸಭಾ ಉಪಚುನಾವಣಾ ಕಣ ರಂಗೇರುತ್ತಿದೆ. ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ನಲ್ಲಿ ಈಗಾಗಲೇ ಬಿಜೆಪಿಯಿಂದ ಗೋಪಾಲಯ್ಯ ಅಖಾಡಕ್ಕೆ ಇಳಿದಿದ್ದಾರೆ. ಇತ್ತ ಕಾಂಗ್ರೆಸ್ನಿಂದ ಶಿವರಾಜು, ಜೆಡಿಎಸ್ನಿಂದ ಗಿರೀಶ್ ಕೆ ನಾಶಿ ನಾಮಪತ್ರ ಸಲ್ಲಿಸಿ ಚುನಾವಣೆಗೆ ಸಜ್ಜಾಗಿದ್ದಾರೆ.
ಈ ಸಂಬಂಧ ಮಾತಾನಾಡಿದ ವಾಟಾಳ್ ನಾಗರಾಜ್, ಭ್ರಷ್ಟಾಚಾರ, ಜಾತಿ, ಪಕ್ಷಾಂತರದ ವಿರುದ್ಧವಾಗಿ ನಿಂತಿದ್ದೇನೆ. ನಾನು ಮನಸ್ಸು ಮಾಡಿದ್ರೆ ಯಾವತ್ತೋ ಮಂತ್ರಿಯಾಗಿ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ, ನಾನು ಅಧಿಕಾರಕ್ಕಾಗಿ ಯಾವತ್ತು ಪಕ್ಷಾಂತರ ಮಾಡಿಲ್ಲ. ಪಕ್ಷಾಂತರವೂ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆ. ರಾತ್ರಿವೊಂದು ಬೆಳಗ್ಗೆವೊಂದು ಪಕ್ಷದಲ್ಲಿರುವುದು, ಸುಪ್ರೀಂಕೋರ್ಟ್ ಬಳಿ ಇನ್ನೊಂದು ಹೇಳುವುದು, ಬಾಂಬೆಯಲ್ಲಿ ಬಚ್ಚಿಟ್ಟುಕೊಳ್ಳುವುದು ಇದೆಲ್ಲ ಎಂತಹ ರಾಜಕಾರಣ. ಇದು ಕರ್ನಾಟಕಕ್ಕೆ ಅಪಾಯಕಾರಿ ಎಂದರು.