ಬೆಂಗಳೂರು : ವಿಧಾನಸೌಧದಲ್ಲಿ ಬಿಸ್ಲೆರಿ ಬಾಟಲ್ ಇಟ್ಕೊಂಡು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿದರೆ ಸರಿಯಿರುತ್ತಾ? ನಾವು ಸಮಸ್ಯೆಯ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ, ಗ್ರಾಮೀಣ ಭಾಗದಲ್ಲಿ ಸಮಸ್ಯೆಯ ಜೊತೆಯೇ ಅವರಿರುತ್ತಾರೆ. ಹಾಗಾಗಿ ಜನರ ಬಳಿ ಹೋಗಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಈ ವರ್ಷ ಅದಕ್ಕಾಗಿಯೇ ನಮ್ಮ ಬಜೆಟ್ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಿಎಂ, ಜಗತ್ತಿನಲ್ಲಿ ಎಲ್ಲ ದೇಶದಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಮಹಿಳೆಯರ ಸುರಕ್ಷತೆ ಮತ್ತು ಆರ್ಥಿಕ ಸುಧಾರಣೆಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಅದಕ್ಕಾಗಿ ನಾಡಿನ ಎಲ್ಲ ಮಹಿಳೆಯರಿಗೆ ಅಂತಾರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳು. ಜನ್ಮ ಪೂರ್ವದ ಸಂಬಂಧ ಪ್ರತಿಯೊಬ್ಬ ಮನುಷ್ಯನಿಗೆ ಯಾವುದಾದರೂ ಇದ್ದರೆ ಅದು ತಾಯಿಯ ಸಂಬಂಧ, ಶ್ರೇಷ್ಠವಾದ ಸಂಬಂಧ ತಾಯಿ ಸಂಬಂಧ. ನಂತರ ತಂದೆ ಬರುತ್ತಾರೆ. ಇದೊಂದು ಶ್ರೇಷ್ಠವಾದ ಪವಿತ್ರವಾದ ನೈಸರ್ಗಿಕ ಸಂಬಂಧ. ತಾಯಿ ಸಂಬಂಧ ಇಲ್ಲದೇ ಹೋದರೆ ಬೆಳವಣಿಗೆ ಅಸಾಧ್ಯ. ಇದನ್ನ ಎಲ್ಲ ಪುರುಷರು ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ - ಸಿಎಂ: ಇಂದು ಎಲ್ಲಾ ಕೆಲಸವನ್ನ ಮಹಿಳೆಯರಿಂದ ಮಾಡಿಸಿಕೊಳ್ಳುತ್ತೇವೆ. ಮೊದಲು ಇಂಥ ಕೆಲಸ ಪುರುಷರು, ಇಂಥ ಕೆಲಸ ಮಹಿಳೆಯರು ಮಾತ್ರ ಮಾಡಬೇಕು ಅಂತಿತ್ತು. ಆದರೆ ಈಗ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಪುರಾಣದಲ್ಲೂ ಮಹಿಳೆಯರ ಪಾತ್ರ ಪ್ರಮುಖ ಎನಿಸಿತ್ತು ಎನ್ನೋದು ಜಗತ್ತಿಗೆ ಗೊತ್ತಿದೆ. ಅವತ್ತು ಕಿತ್ತೂರು ರಾಣಿ ಚನ್ನಮ್ಮ ಇದ್ದರು. ಹಾಗೆಯೇ ಇವತ್ತು ನಮ್ಮ ಚೀಫ್ ಸೆಕ್ರೆಟರಿ ವಂದಿತಾ ಶರ್ಮಾ ಮಹಿಳೆ ಇದ್ದಾರೆ. ಮಹಿಳೆಯರಿಗೆ ಯಾವುದು ಅಸಾಧ್ಯ ಅಂತ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಇದ್ದಾರೆ. ಮಂಜುಳಾ ಅವರು ಮೂರ್ನಾಲ್ಕು ಇಲಾಖೆಯನ್ನ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆಯಲ್ಲೂ ಮಹಿಳೆಯರ ಪಾತ್ರ ಮುಖ್ಯವಾದದ್ದು, ಮನೆಯಲ್ಲೂ ಕೆಲಸ ಮಾಡಿ ಗದ್ದೆಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡ್ತಾಳೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಸಹನೆ ಮೆಚ್ಚಿಕೊಳ್ಳಬೇಕು - ಬೊಮ್ಮಾಯಿ: ವಿಧಾನಸೌಧದಲ್ಲಿ ಬಿಸ್ಲರಿ ಬಾಟೆಲ್ ಇಟ್ಟುಕೊಂಡು ಚರ್ಚೆ ಮಾಡೋದು ಸರಿಯಲ್ಲ. ಹಾಗೆಯೇ ಜನರ ಬಳಿ ಹೋಗಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಈ ವರ್ಷ ನಮ್ಮ ಬಜೆಟ್ನಲ್ಲಿ ರೈತ ಮಹಿಳೆಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಅಂಗನವಾಡಿ ಕಾರ್ಯಕರ್ತೆಯರ ಸಹನೆ ಮೆಚ್ಚಿಕೊಳ್ಳಬೇಕು. ಈ ವರ್ಷ 1ಸಾವಿರ ಗೌರವ ಧನ ಹೆಚ್ಚಳ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗೌರವಧನ ನೀಡುವ ಭರವಸೆ ನೀಡುತ್ತೇನೆ ಎನ್ನುತ್ತಾ ಮಹಿಳೆಯರಿಗಾಗಿ ತಮ್ಮ ಸರ್ಕಾರ ಏನೆಲ್ಲಾ ಯೋಜನೆ ರೂಪಿಸಿದೆ ಎನ್ನುವುದರ ಬಗ್ಗೆ ವಿವರವಾಗಿ ಹೇಳಿದರು.
ನನ್ನ ನಂಬಿಕೆ ನನ್ನ ತಾಯಂದಿರ ಮೇಲೆ ಜಾಸ್ತಿ, ಯಾವ ಗಂಡಸರು ತಪ್ಪು ತಿಳಿದುಕೊಳ್ಳಬೇಡಿ. ಮಹಿಳೆಯರು ತಮ್ಮ ಕರ್ತವ್ಯ ಪ್ರಜ್ಞೆ ಜೊತೆ ಪ್ರಾಮಾಣಿಕರಾಗಿರ್ತಾರೆ. ಎಲ್ಲಾ ರಂಗದಲ್ಲೂ ಮುಂದೆ ಬಂದಿದ್ದಾರೆ. ಬಿಎಂಟಿಸಿನಲ್ಲಿ ಮಹಿಳಾ ಡ್ರೈವರ್ ಇದ್ದಾರೆ. ಅವರು ಬಸ್ ಓಡಿಸಿದರೆ ನನಗೆ ಬಹಳ ನಂಬಿಕೆ ಇರುತ್ತದೆ. ಬೇರೆ ನಮ್ಮ ಗಂಡಸರಾದ್ರೆ ಸಂಜೆ ಎಲ್ಲೋ ಹೋಗಬೇಕು ಅಂತಿರುತ್ತೆ ಎಂದು ಸಿಎಂ ಹೇಳುತ್ತಿದ್ದ ಹಾಗೆ ಸಭಿಕರು ನಗೆಗಡಲಲ್ಲಿ ತೇಲಿದರು.
ಅಮೆರಿಕದ ಬ್ಯಾಂಕ್ vs ಮಹಿಳೆಯರ ಜೀರಿಗೆ ಡಬ್ಬಿ ಪ್ರಸ್ತಾಪ : ಬ್ಯಾಂಕ್ಗಳು ಬೇಕಾದರೆ ದಿವಾಳಿ ಆಗುತ್ತವೆ. ಆದರೆ, ಮಹಿಳೆಯರು ಮನೆಯಲ್ಲಿ ಕೂಡಿಟ್ಟ ಹಣ ಯಾವತ್ತೂ ಏನು ಆಗಲ್ಲ. ಮಹಿಳೆಯರಲ್ಲಿ ಉಳಿತಾಯದ ಗುಣವಿರುತ್ತದೆ. ಹಾಗಾಗಿ ಅಮೆರಿಕಾದ ಬ್ಯಾಂಕ್ ಮತ್ತು ಜೀರಿಗೆ ಡಬ್ಬಿ ಪಂದ್ಯ ಇಟ್ಟರೆ ನಮ್ಮ ಜೀರಿಗೆ ಡಬ್ಬಿನೇ ಗೆಲ್ಲೋದು ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕನ್ನಡದ ತಾಯಂದಿರು ಬೆಳೆಯಬೇಕು. ಪೆಟ್ರೋಲ್ ಬಂಕ್ನಲ್ಲಿಯೂ ಇದ್ದಾರೆ. ಟ್ರಕ್ ಓಡಿಸ್ತಾರೆ. ಡಿಆರ್ಡಿಓ ದಲ್ಲಿದ್ದಾರೆ. ಪೈಲಟ್ಗಳಲ್ಲಿದ್ದಾರೆ. ಮಹಿಳೆಯರು ಬಹಳ ಸ್ಮೂತಾಗಿ ವಿಮಾನ ನಿಲ್ಲಿಸುತ್ತಾರೆ. ಒಮ್ಮೆ ಗುಲ್ಬರ್ಗಾಕ್ಕೆ ವಿಮಾನದಲ್ಲಿ ಹೋಗುವಾಗ ಏನೋ ಜಾಸ್ತಿ ಶೇಕ್ ಆಗಿತ್ತು. ಹೋಗಿ ವಿಚಾರಿಸೋಣ ಅಂತ ಹೋದರೆ ಅದು ಮಹಿಳಾ ಪೈಲಟ್. ಏನೂ ಆಗಿಲ್ಲ ಸ್ಮಾಲ್ ಪ್ರಾಬ್ಲಂ ಅಂದರು. ನನಗೆ ಮೇಲೆ ಕೆಳಗಡೆ ಭಯವಾಗಿತ್ತು. ಆದರೆ 10 ನಿಮಿಷದಲ್ಲಿ ಆ ಪ್ರಾಬ್ಲಂ ಸಾಲ್ವ್ ಮಾಡಿ ಸೇಫ್ ಲ್ಯಾಂಡಿಂಗ್ ಮಾಡಿದ್ದರು. ಗಂಡಸರಾದ್ರೆ ದಡಬಡ ಮತಾ ಇಳಿಸ್ತಾರೆ. ಆದರೆ ಹೆಣ್ಣು ಮಕ್ಕಳು ಸ್ಮೂತ್ ಆಗಿ ವಿಮಾನ ಲ್ಯಾಂಡಿಂಗ್ ಮಾಡಿಸ್ತಾರೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟ ಮೇಳವನ್ನ ಸಿಎಂ ಬೊಮ್ಮಾಯಿ ಉದ್ಘಾಟಿಸಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸಿದ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದರು. 18 ಮಹಿಳೆಯರು 6 ಸಂಸ್ಥೆಗಳು ಸೇರಿದಂತೆ ಒಟ್ಟು 24 ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿದರು.
ಇದನ್ನೂ ಓದಿ : ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ : ಕಾಂಗ್ರೆಸ್ ಉಚಿತ ಯೋಜನೆಗಳಿಗೆ ಸಿಎಂ ತಿರುಗೇಟು