ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ನನಗೆ ಸರ್ಟಿಫಿಕೆಟ್ ಬೇಕಿಲ್ಲ, ಅದರ ಅಗತ್ಯವೂ ನನಗಿಲ್ಲ, ಸ್ಯಾಂಟ್ರೋ ರವಿಯಂತ ಅನೇಕರನ್ನು ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನವರು ಹುಟ್ಟಿ ಹಾಕಿದ್ದಾರೆಯೇ ವಿನಃ, ಬಿಜೆಪಿಯವರಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಕೆಲವೊಂದು ಶಬ್ದಗಳನ್ನು ಬಳಕೆ ಮಾಡುತ್ತಿದ್ದಾರೆ, ನಿಜಕ್ಕೂ ಈ ಮಾತುಗಳು ಅವರಿಗೆ ಶೋಭೆ ತರುವಂತದ್ದಲ್ಲ. ಅವರೊಬ್ಬ ತಾವು ಮಾಜಿ ಮುಖ್ಯಮಂತ್ರಿ ಅನ್ನೋದನ್ನು ಅರಿತು ಮಾತನಾಡಬೇಕು. ಅವರಿಂದ ಸರ್ಟಿಫಿಕೆಟ್ ಪಡೆಯುವ ಅಗತ್ಯತೆಯೂ ನನಗೆ ಇಲ್ಲ ಎಂದು ತಿರುಗೇಟು ನೀಡಿದರು.
ಆರ್.ಡಿ ಪಾಟೀಲ್ ವಿಡಿಯೋ ಕುರಿತು ಪ್ರತಿಕ್ರಿಯೆ: ಕಾಂಗ್ರೆಸ್‌ನವರು ಎಷ್ಟೇ ಪ್ರತಿಭಟನೆ ಮಾಡಿದರೂ ಜನ ಅವರನ್ನು ನಂಬಲ್ಲ, ಲೋಕಾಯುಕ್ತ ಸಂಸ್ಥೆಯ ಬಾಗಿಲು ಹಾಕಿದವರು ಅವರು. ಪಿಎಸ್ಐ ಕೇಸ್ನಲ್ಲಿ ಆರ್.ಡಿ ಪಾಟೀಲ್ನನ್ನು ಬಂಧಿಸಲಾಗಿತ್ತು. ಆರ್ಡಿ ಪಾಟೀಲ್ ಕಾಂಗ್ರೆಸ್ ಮುಖಂಡ, ಆತ ನಮ್ಮವನಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು, ಅವರದ್ದೇ ಪಕ್ಷದ ರಮೇಶ್ ಕುಮಾರ್ ಅವರೇ ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿರೋದಾಗಿ ಹೇಳಿದ್ದರು. ಇದಕ್ಕಿಂತಲೂ ಉದಾಹರಣೆ ಬೇಕಾ? ಅವರು ಭ್ರಷ್ಟಾಚಾರಿಗಳು ಅನ್ನೋದಕ್ಕೆ? ಗಿಮಿಕ್ ಮಾಡಿ ಓಟ್ ಪಡೆಯಲು ಈ ರೀತಿ ಪ್ರತಿಭಟನೆ ಮಾಡಿದ್ದಾರೆ, ಅವರ ತಂತ್ರ ಸಕ್ಸಸ್ ಆಗಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರ ಆಡಳಿತ ಕಾಲದಲ್ಲಿ ಅರ್ಕಾವತಿ ರೀಡೂ ಪ್ರಕರಣ ಆಯಿತು. ಕೆಂಪಣ್ಣ ಆಯೋಗ ರಚನೆ ಮಾಡಿ ರಕ್ಷಣೆ ಪಡೆದರು, ಆರ್.ಡಿ ಪಾಟೀಲ್ ಜಿಲ್ಲಾ ಪಂಚಾಯತ್ನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದರು ಕಾಂಗ್ರೆಸ್‌ನವರು ಆರ್.ಡಿ ಪಾಟೀಲ್ ನಮ್ಮವರಲ್ಲ ಅಂದರು. ಅವರು ಅಂದಿದ್ದು ವಿಧಾನಸೌಧದಲ್ಲೇ ರೆಕಾರ್ಡ್ ಆಗಿದೆ. ಕಾಂಗ್ರೆಸ್‌ನವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಬೆರಳು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯಾರಿಗೂ ಕ್ಷಮೆ ಇಲ್ಲ: ಸಿಐಡಿ ತನಿಖಾಧಿಕಾರಿ ಶಂಕರ್ ಗೌಡ ವಿರುದ್ಧ ಆರ್.ಡಿ ಪಾಟೀಲ್ ಮಾಡಿರುವ ಹಣ ಬೇಡಿಕೆ ಆರೋಪದ ಆಡಿಯೋ/ವಿಡಿಯೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಆರೋಪಿ ಏನು ಬೇಕಾದರೂ ಹೇಳಬಹುದು. ವಿಡಿಯೋ ಸತ್ಯ ಆಗಿದ್ದರೆ ತನಿಖಾಧಿಕಾರಿಯನ್ನು ಒಂದು ಕ್ಷಣವೂ ಬಿಡುವುದಿಲ್ಲ. ಸಿಐಡಿ ಅಧಿಕಾರಿ ಇರಬಹುದು, ಐಪಿಎಸ್ ಅಧಿಕಾರಿಯಾಗಿರಬಹುದು ಯಾರನ್ನ ಬಿಡೋದಿಲ್ಲ. ಆರೋಪಿಯ ಹೇಳಿಕೆ ಎಷ್ಟು ಮಹತ್ವ ಇದೆ ಎಂದು ನೋಡಬೇಕಾಗುತ್ತದೆ. ವಿಡಿಯೋ ಇದ್ದರೆ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲು ಹೇಳುತ್ತೇನೆ, ಯಾರಿಗೂ ಕ್ಷಮೆ ಇಲ್ಲ. ಆರೋಪಿ ಆರ್.ಡಿ ಪಾಟೀಲ್ನ ಈ ಹೇಳಿಕೆ ಬಗ್ಗೆ ತನಿಖೆ ಆಗಲಿದೆ ಎಂದು ತಿಳಿಸಿದರು.
ಸ್ಯಾಂಟ್ರೋ ರವಿ ರೀತಿ ಇನ್ನೂ ಸಾಕಷ್ಟು ಮಂದಿ ಸರ್ಕಾರದಲ್ಲಿ ಮಿನಿಸ್ಟರ್ಗಳ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ಸತ್ಯಕ್ಕೆ ದೂರ, ಅಂತಹ ವ್ಯಕ್ತಿಗಳು ನಮ್ಮ ಸರ್ಕಾರದಲ್ಲಿಲ್ಲ, ಸಮಾಜದಲ್ಲಿರಬಹುದು. ಕುಮಾರಸ್ವಾಮಿ ಅವರು ಬೆಳೆಸಿರುವವರು ಇರಬಹುದು, ಕಾಂಗ್ರೆಸ್‌ನವರು ಬೆಳೆಸಿರುವವರು ಇರಬಹುದು ಎಂದು ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅನೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ. ಅದಲ್ಲದೇ ಪಕ್ಷದ ಕಾರ್ಯಕ್ರಮಕ್ಕೂ ಕೂಡ ಖಂಡಿತ ಬರುತ್ತಾರೆ, ತುಮಕೂರಿಗೂ ಭೇಟಿ ನೀಡುತ್ತಾರೆ. ಆದ್ರೆ ಇನ್ನೂ ಸಂಪೂರ್ಣ ವೇಳಾಪಟ್ಟಿ ನಿಗದಿಯಾಗಿಲ್ಲ ನಿಗದಿಯಾದ ತಕ್ಷಣ ಹೇಳುತ್ತೇನೆ ಎಂದರು.
ಶೃಂಗೇರಿ ಶಾಸಕ ರಾಜೇಗೌಡರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ರಾಜೇಗೌಡ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದು, ಅಲ್ಪಸಂಖ್ಯಾತರ ಓಲೈಕೆಗಾಗಿ ಹೀಗೆ ಮಾತಾಡಿದ್ದಾರೆ. ಈ ರೀತಿಯಲ್ಲಿ ಓಲೈಕೆ ಮಾತುಗಳನ್ನಾಡಿಯೇ ಕಾಂಗ್ರೆಸ್ ಕಳೆದುಹೋಗುತ್ತಿದೆ. ಕಾಂಗ್ರೆಸ್‌ನವರ ಇಂಥ ಮಾತುಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಗೃಹ ಸಚಿವರು ಹೇಳಿದರು.
ಇದನ್ನೂ ಓದಿ: ಆರ್.ಡಿ.ಪಾಟೀಲ್ ಆಡಿಯೋ: ತನಿಖಾಧಿಕಾರಿಯ ತಪ್ಪಿದ್ದರೆ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಬೊಮ್ಮಾಯಿ