ಬೆಂಗಳೂರು: “ಹೀ ಇಸ್ ಮೈ ಗುಡ್ ಫ್ರೆಂಡ್, ಟುಡೇ ಆಲ್ಸೋ, ಟುಮಾರೋ ಆಲ್ಸೋ” (ಅವರು ಇಂದಿಗೂ ನನ್ನ ಒಳ್ಳೆಯ ಸ್ನೇಹಿತರೇ ನಾಳೆಯೂ ಸಹ”) ಎಂದು ಮಾತನಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬುಧವಾರ ಮಾಜಿ ಸಿಎಂ ಕುಮಾರಸ್ವಾಮಿ ಬಗೆಗಿನ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ.
ಹೆಚ್ಡಿಕೆ ಈಗಲೂ ನನ್ನ ಸ್ನೇಹಿತರೇ, ನಾನು ದ್ವೇಷ ಮಾಡುವ ಕಾಲ ಹೋಯಿತು ಎಂದು ಮಾಧ್ಯಮಗಳ ಮುಂದೆ ಹೇಳುವ ಮೂಲಕ ತಾವು ಈಗಲೂ ಆತ್ಮೀಯರು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದರು.
ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ ಮಾತ್ರ ತಮ್ಮ ಸ್ನೇಹಿತರಾಗಿರಲಿಲ್ಲ. ಈಗಲೂ ಅವರು ತಮ್ಮ ದೋಸ್ತಿಯೇ. ಮುಂದೆಯೂ ಇರುತ್ತಾರೆ ಎಂದು ಹೇಳುವ ಮೂಲಕ ತಮ್ಮ ನಡುವೆ ಆತ್ಮೀಯತೆ ಇದೆ ಎಂಬ ವಿವರ ನೀಡುವ ಪ್ರಯತ್ನ ಮಾಡಿದರು.
ಇದನ್ನೂ ಓದಿ : ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿನ ಮಾತು: ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ
ನಮ್ಮಿಬ್ಬರ ಮಧ್ಯೆ ದ್ವೇಷ ಇದೆ ಎನ್ನುತ್ತೀರಿ ನೀವು. ಆದರೆ, ನಾನು ದ್ವೇಷ ಮಾಡುವ ಕಾಲ ಹೋಯಿತು. ನಾನು ದ್ವೇಷ ಮಾಡುವುದನ್ನು ಬಿಟ್ಟುಬಿಟ್ಟಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಮಯ ಬಂದಾಗ ಪ್ರತಿಕ್ರಿಯಿಸುವೆ. ನಾನು ಬಂಡೆಯೂ ಅಲ್ಲ, ಮರಳು ಅಲ್ಲ, ಜಲ್ಲಿಯೂ ಅಲ್ಲ. ನನ್ನನ್ನು ಉಪಯೋಗಿಸಿಕೊಂಡಿದ್ದಾರೆ ಬಿಡಿ. ನನಗ್ಯಾಕೆ ನೋವಾಗಬೇಕು? ಜೆಡಿಎಸ್ ಬಗ್ಗೆ ನಾನೇಕೆ ಮಾತಾಡಲಿ? ಅವರದ್ದು ಒಂದು ಪಕ್ಷ, ಅವರನ್ನು ಏಕೆ ಡಿಗ್ರೇಡ್ ಮಾಡುವುದು? ಸಿಎಂ ಮತ್ತು ಕುಮಾರಸ್ವಾಮಿ ಅವರ ಅಡ್ಜಸ್ಟ್ಮೆಂಟ್ ಏನಿದೆಯೋ ಗೊತ್ತಿಲ್ಲ. ಜೆಡಿಎಸ್ ಕೂಡ ಒಂದು ಪಕ್ಷ. ಅದರದೇ ಆದ ಸಂವಿಧಾನ, ಸಿದ್ಧಾಂತ ಇದೆ. ಅವರು ಹಾಗೂ ಬಿಜೆಪಿ ಹೇಗೆ ಒಪ್ಪಂದ ಮಾಡಿಕೊಳ್ಳುತ್ತಾರೋ ಅದು ಅವರಿಗೆ ಬಿಟ್ಟದ್ದು ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಸಾಧ್ಯತೆಗೆ ಟಾಂಗ್ ಕೊಟ್ಟರು.
ಬಿಜೆಪಿಯವರು ಜೆಡಿಎಸ್ನವರನ್ನು ಯಾವ ರೀತಿ ನೋಡುತ್ತಾರೋ ಗೊತ್ತಿಲ್ಲ. ನಾವಂತೂ ಆ ಪಕ್ಷವನ್ನು ಗೌರವದಿಂದ ನೋಡುತ್ತೇವೆ. ನಾನು ಬೇರೆ ಪಕ್ಷಗಳ ಬಗ್ಗೆ ಮಾತನಾಡಲ್ಲ. ಅವರು ಅನೇಕ ಬಾರಿ ಸರ್ಕಾರ ಮಾಡಿದ್ದಾರೆ. ನಾವು ಅವರ ಜತೆ ಸರ್ಕಾರ ಮಾಡಿದ್ದೇವೆ. ಅವರ ಬಗ್ಗೆ ಕೀಳಾಗಿ ಮಾತನಾಡಲು ನಾನು ಇಚ್ಛಿಸುವುದಿಲ್ಲ ಎನ್ನುವ ಮೂಲಕ ಹಳೇ ದೋಸ್ತಿ ಸರ್ಕಾರದ ದಿನಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ : ಮಧ್ಯರಾತ್ರಿ ಸಿಎಂ ಭೇಟಿ ಮಾಡಿದ್ದು ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ : ಹೆಚ್‌ಡಿಕೆಗೆ ಡಿಕೆಶಿ ಸವಾಲ್
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ದೊಡ್ಡ ದೊಡ್ಡ ಅನುಭವಿ ಪಂಡಿತರಿದ್ದಾರೆ. ನಾನು ಹೇಗೆ ಅವರಿಗೆ ಸಲಹೆ ನೀಡಲಿ? ಅವರು ತಮಗೆ ತೋಚಿದ ನಿರ್ಧಾರ ಹಾಗೂ ತೀರ್ಮಾನಕೈಗೊಳ್ಳಲು ಶಕ್ತರು. ಇದುವರೆಗೂ ನಾವು ನೀಡಿದ ಯಾವುದೇ ಸಲಹೆ ಸೂಚನೆಯನ್ನು ಅವರು ಸ್ವೀಕರಿಸಿಲ್ಲ. ಈ ಹಿಂದೆಯೇ ಅದನ್ನು ನಾವು ಗಮನಿಸಿದ್ದು ಇನ್ನು ಮುಂದಿನ ದಿನಗಳಲ್ಲಿ ಸಲಹೆ ನೀಡಬಾರದು ಎಂದು ತೀರ್ಮಾನಿಸಿದ್ದೇವೆ. ವಿಪರ್ಯಾಸವೆಂದರೆ ಅವರು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅವರಿಗೆ ಅವರದೇ ಆದ ವೈಯಕ್ತಿಕ ಅಜೆಂಡಾ ಇದೆ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದು ಹೇಳುತ್ತಾರೆ. ರೈತರು ಹೋರಾಟ ಮಾಡಿದರೆ ಕಾಂಗ್ರೆಸ್ನವರು ಎತ್ತಿಕಟ್ಟಿದ್ದಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಅವರು ನಮ್ಮನ್ನು ನೆನೆಸಿಕೊಳ್ಳುತ್ತಿರಬೇಕು, ನೆನೆಸಿಕೊಳ್ಳಲಿ ಬಿಡಿ ಎಂದು ಶಿವಕುಮಾರ್ ಹೇಳಿದರು.
ಒಟ್ಟಾರೆ ದೋಸ್ತಿ ಸರ್ಕಾರದ ಸಂದರ್ಭದಲ್ಲಿ ಕುಮಾರಸ್ವಾಮಿ ಜೊತೆಗಿನ ತಮ್ಮ ನಂಟನ್ನು ಇಂದು ಮತ್ತೊಮ್ಮೆ ಮೆಲಕು ಹಾಕುವ ಕಾರ್ಯವನ್ನು ಡಿಕೆ ಶಿವಕುಮಾರ್ ಮಾಡಿದರು.