ಬೆಂಗಳೂರು: ಉಪಚುನಾವಣೆಯಲ್ಲಿ ಪರಾಭವಗೊಂಡ ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಇಂದು ಬೆಳಿಗ್ಗೆ ಸಿಎಂ ನಿವಾಸವಿರುವ ಡಾಲರ್ಸ್ ಕಾಲೋನಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ, ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ನಾನು ಸೋಲನುಭವಿಸಬೇಕಾಯ್ತು. ಆದರೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಖಾತೆ ತೆರೆದಿಲ್ಲ. ಉಪಚುನಾವಣೆಯಲ್ಲಿ ನನಗೆ ಸೋಲಾದರೂ ನಗರಸಭೆ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿದಿದ್ದಾರೆ. ಹಾಗಾಗಿ ಹೊಸಕೋಟೆ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬಿಡಿಎ ಅಧ್ಯಕ್ಷ ಸ್ಥಾನ ಕೇಳಿರುವ ವಿಚಾರ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವ ಹುದ್ದೆಯನ್ನೂ ಕೇಳಿಲ್ಲ, ಸಿಎಂ ಯಾವ ಸ್ಥಾನ ಕೊಟ್ರೂ ಸಂತೋಷದಿಂದ ಸ್ವೀಕರಿಸುವುದಾಗಿ ತಿಳಿಸಿದರು.
ಉಪುಚುನಾವಣೆಯಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಹುದ್ದೆ ಅಲಂಕರಿಸಲು ಇರುವ ಕಾನೂನು ತೊಡಕುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಮ್ಮೆ ಚುನಾವಣೆಗೆ ಸಲ್ಲಿಸಿದ ನಾಮಪತ್ರ ಸ್ವೀಕಾರಾರ್ಹವಾದ ಬಳಿಕ ಚುನಾವಣೆಯಲ್ಲಿ ಗೆಲ್ಲಲಿ ಸೋಲಲಿ, ಅಲ್ಲಿಗೆ ಸುಪ್ರೀಂಕೋರ್ಟ್ ಆದೇಶ ರದ್ದಾಗುತ್ತೆ ಅಂತ ಕಾನೂನು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ ಎಂದು ಹೇಳಿದರು.
ಬಚ್ಚೇಗೌಡರ ಉಚ್ಛಾಟನೆಗೆ ಎಂಟಿಬಿ ಆಗ್ರಹ:
ಇದಾದ ನಂತ್ರ ಸಂಸದ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು, ಇವತ್ತೂ ಕೂಡ ನಾನು ಸಿಎಂ ಜೊತೆ ಚರ್ಚಿಸಿದ್ದೇನೆ. ನನ್ನ ಸೋಲಿಗೆ ಬಚ್ಚೇಗೌಡ ಅವರೇ ಕಾರಣ. ಹಾಗಾಗಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಛಾಟನೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಹಾಗೆಯೇ ಬಿಜೆಪಿಯ ಕೆಲವು ನಾಯಕರಿಗೂ ಈ ಕುರಿತಾಗಿ ಪತ್ರ ಬರೆದಿದ್ದೇನೆ. ಸಮಯ, ಸಂದರ್ಭ ಬಂದಾಗ ಬಚ್ಚೆೇಗೌಡರನ್ನು ಉಚ್ಛಾಟನೆ ಮಾಡಲಾಗುತ್ತದೆ ಎಂದರು.