ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಏನೇನು ನೆರವು ಬೇಕು ಅಂತ ಹೇಳೋದಕ್ಕೆ ಸಮಯ ಬೇಕಾಗುತ್ತದೆ. ಈವರೆಗೆ ರಾಜ್ಯ ಸರ್ಕಾರ ಏನು ನೆರವು ಬೇಕು ಅಂತ ಕೇಂದ್ರಕ್ಕೆ ಹೇಳಿಲ್ಲ. ತುರ್ತಾಗಿ ನೆರವು ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪದಲ್ಲಿದೆ ನಾನು ಸಹ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೊರಟಿದ್ದೇನೆ, ಪರಿಹಾರ ಕಾಮಗಾರಿಗಳಿಗೆ ಚುರುಕು ಕೊಡುವ ಕೆಲಸ ಮಾಡುತ್ತೇನೆ ಎಂದರು.
ರಾಜ್ಯಕ್ಕೆ ನೆರವು ನೀಡುವ ಬಗ್ಗೆ ಗೃಹ ಇಲಾಖೆ ಜೊತೆ ಚರ್ಚಿಸಿ ತಕ್ಷಣ ಅಗತ್ಯ ನೆರವು ಒದಗಿಸುತ್ತೇವೆ. ಮೋದಿ ಸರ್ಕಾರ ಯಾವುದೇ ರಾಜ್ಯದ ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂಧಿಸಲಿದೆ. ಪ್ರವಾಹದ ಒಟ್ಟು ನಷ್ಟದ ಅಂದಾಜು ನನಗೆ ಇದೆ, ಕೇಂದ್ರದಿಂದ ಎನ್ಡಿಆರ್ಎಫ್ ಮೂಲಕ ನೆರವು ಕೊಡಲಾಗುತ್ತದೆ. ಪ್ರವಾಹದಿಂದ ದೊಡ್ಡ ಪ್ರಮಾಣದ ನಷ್ಟ ಆಗಿದೆ. ಗೃಹ ಸಚಿವರಿಂದ ನೆರವು ಕೊಡಿಸಲು ನಾನು ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ಸಚಿವ ಸಂಪುಟ ರಚನೆ ವಿಚಾರ ವಿಳಂಬವಾಗುತ್ತಿದೆ ಎಂದು ವಿಪಕ್ಷಗಳಿಂದ ಟೀಕೆ ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ಟೀಕೆ ಸಹಜ ಈಗಿನ ಸಂದರ್ಭದಲ್ಲಿ ಟೀಕೆ ಸಲ್ಲದು ಕುಮಾರಸ್ವಾಮಿ ಸರ್ಕಾರ ಇದ್ದರೂ ನಾವು ನೆರವು ಕೊಡುತ್ತಿದ್ದೆವು. ಈ ವಯಸ್ಸಲ್ಲೂ ಸಿಎಂ ಯಡಿಯೂರಪ್ಪ ಓಡಾಡಿ ಪ್ರವಾಹ ಪರಿಸ್ಥಿತಿ ನಿಭಾಯಿಸ್ತಿದ್ದಾರೆ. ಸಿಎಂ ದೆಹಲಿಗೆ ಬಂದರು, ಅಲ್ಲಿಂದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ ಸಧ್ಯ ನೆರೆ ಪೀಡಿತರ ರಕ್ಷಣೆಗೆ ಧಾವಿಸೋಣ ವಿಕ್ಷಗಳು ಟೀಕೆ ನಿಲ್ಲಿಸಲಿ ಎಂದು ಮನವಿ ಮಾಡಿದರು.
ಸಂಪುಟ ರಚನೆ ವಿಳಂಬಕ್ಕೆ ಕೆಲವು ಅನಿವಾರ್ಯ ಕಾರಣಗಳಿವೆ. ಸಿಎಂ ದೆಹಲಿಯಲ್ಲಿ ಇದರ ಚರ್ಚೆಗೆ ಬಂದಿದ್ದರು. ಆದರೆ, ಸುಷ್ಮಾ ಸ್ವರಾಜ್ ನಿಧನದಿಂದ ಎಲ್ಲರೂ ಬ್ಯುಸಿ ಆದರು. ಕೇಂದ್ರ ಸರ್ಕಾರಕ್ಕೆ ರಾಜ್ಯದ ಸ್ಥಿತಿಗಳ ಗಂಭೀರತೆ ಅರ್ಥವಾಗಿದೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ರಚನೆ ಆಗಲಿದೆ ಎಂದರು.