ಬೆಂಗಳೂರು: ನಾನು ಆಕಾಂಕ್ಷಿ ಅಂತ ನಿಮಗೆ ಯಾರು ಹೇಳಿದ್ದು?, ನಾನು ಯಾವುದೇ ಭವಿಷ್ಯ ಹೇಳಲ್ಲ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಏನೆಲ್ಲಾ ಹೇಳಬೇಕು ಅದನ್ನೆಲ್ಲಾ ನಾನು ಹೇಳುತ್ತೇನೆ. ಆದರೆ, ಪಕ್ಷದ ವಿಚಾರವನ್ನು ಪಕ್ಷದ ವೇದಿಕೆಯಲ್ಲೇ ಹೇಳಬೇಕು ಎರಡನೇ ಬಾರಿ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗುವ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು,ಸರ್ಕಾರದ ಪರಿಸ್ಥಿತಿ ಹೇಗಿದೆ ಎಂಬುದು ನಮಗೆ ಗೊತ್ತು.
ಬಿಜೆಪಿಯ 105 ಶಾಸಕರುಗಳೂ ಸಚಿವ ಸ್ಥಾನಕ್ಕೆ ಅರ್ಹರೇ. ಯಾರಿಗೆ ಕೊಡಬೇಕು ಎಂಬುದನ್ನು ಸಿಎಂ, ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಈ ವಿಷಯದಲ್ಲಿ ನನಗೆ ಯಾವುದೇ ಬೇಸರ ಇಲ್ಲ ಎಂದು ತಿಳಿಸಿದರು. ನೆರೆ ಪ್ರದೇಶಗಳಿಗೆ ಸಚಿವರ ಭೇಟಿ ವೇಳೆ ಗೈರಾಗಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಅದು ಹಠಾತ್ ನಿರ್ಧಾರವಾಗಿದ್ದು, ನಾನು ವೈಯಕ್ತಿಕ ವಿಚಾರವಾಗಿ ಬೇರೆ ಕಡೆ ಇದ್ದೆ. ಕೊಡಗು ದೊಡ್ಡ ಕ್ಷೇತ್ರವಾಗಿದ್ದು,ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡುವುದು ಕಷ್ಟ ಎಂದು ಕೆ.ಜಿ.ಬೋಪಯ್ಯ ಸಮಾಜಾಯಿಷಿ ನೀಡಿದರು.