ಬೆಂಗಳೂರು : ಹೈದರಾಬಾದ್ ಕರ್ನಾಟಕ ಭಾಗದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ನೀಡುವ ಹೈ-ಕ ಪ್ರಮಾಣ ಪತ್ರ ನಿಯಮ ತಿದ್ದುಪಡಿ ಮಾಡುವಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಹೈದರಾಬಾದ್ ಕರ್ನಾಟಕ ಭಾಗದವರೇ ಆದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸವಿತಾ ಆರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್ ಬಿ ಬೂದಿಹಾಳ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಅದರಂತೆ ಇನ್ನು ಮುಂದೆ 45 ದಿನಗಳಲ್ಲೇ ಹೈದರಾಬಾದ್ ಕರ್ನಾಟಕ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ನಿಯಮ ರದ್ದಾಗಿದೆ. ಈ ನಿಯಮಕ್ಕೆ ಸರ್ಕಾರ ಇದೀಗ ತಿದ್ದುಪಡಿ ಮಾಡಬೇಕಿದೆ.
ಪೀಠ ತನ್ನ ತೀರ್ಪಿನಲ್ಲಿ ಮೀಸಲು ಉದ್ದೇಶ ಈ ಭಾಗದ ಜನರಿಗೆ ಅವಕಾಶ ಕಲ್ಪಿಸುವುದಷ್ಟೇ ಆಗಿದೆ. ಹೀಗಾಗಿ, ಕಾಲಮಿತಿ ಕಾರಣಕ್ಕಾಗಿ ಅವಕಾಶ ನಿರಾಕರಿಸುವುದು ಸಾಧ್ಯವಿಲ್ಲ. ಹೀಗಾಗಿ, ನಿಯಮ ರದ್ದುಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಚಿದೆ.
ಸರ್ಕಾರ ಹೈದರಾಬಾದ್ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಮೀಸಲು ಕಲ್ಪಿಸಲು ಸಂವಿಧಾನದ ವಿಧಿ 371 (ಜೆ)ಗೆ ಪೂರಕವಾಗಿ 2013ರಲ್ಲಿ ಮೀಸಲು ನಿಯಮ ಜಾರಿ ಮಾಡಿದೆ. ಅದರಂತೆ ಹೈ-ಕ ಭಾಗದ ಆರು ಜಿಲ್ಲೆಗಳ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಹೈದರಾಬಾದ್ ಕರ್ನಾಟಕ ಪ್ರಮಾಣ ಪತ್ರವನ್ನು 45 ದಿನಗಳಲ್ಲಿ ಸಲ್ಲಿಸಬೇಕಿತ್ತು. ಈ ನಿಯಮದಿಂದಾಗಿ ಪ್ರಮಾಣ ಪತ್ರ ಪಡೆಯುವ ಸಮಯದಲ್ಲಿ ಏರುಪೇರಾದ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಸಮಸ್ಯೆಯಾಗುತ್ತಿತ್ತು.