ಬೆಂಗಳೂರು : ಮೊದಲನೆ ಪತಿಯಿಂದ ವಿಚ್ಛೇದನ ಪಡೆದು ಎರಡನೆ ವಿವಾಹವಾದ ಮಹಿಳೆ, ಪತಿಯ ಹಿಂಸೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀರಾಮಪುರದ ನಿವಾಸಿ ಕಾತ್ಯಾಯಿನಿ (29) ಮೃತ ದುರ್ದೈವಿ. ಈಕೆಯ ಎರಡನೇ ಗಂಡ ಆರೋಪಿ ಶಶಿಧರ್ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಾತ್ಯಾಯಿನಿ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬರನ್ನು ವಿವಾಹವಾಗಿ ಅವರಿಂದ ವಿಚ್ಛೇದನ ಪಡೆದಿದ್ದರು. ನಂತರ ಶಶಿಧರ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಅನುಮಾನ ಹುಟ್ಟಿ ಜಗಳ ಶುರುವಾಗಿತ್ತು. ಈ ಬೆಳವಣಿಗೆಯಿಂದ ನೊಂದ ಕಾತ್ಯಾಯಿನಿ ಮೂರು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಹಾಗೂ ಆತನ ಮನೆಯವರು ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾತ್ಯಾಯಿನಿ ಪಾಲಕರು ಆರೋಪಿಸಿದ್ದಾರೆ. ಮಗಳು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ನಿಂದ ಬಂದ ಒಂದೂವರೆ ಲಕ್ಷ ಪಿಎಫ್ ಹಣ ಪತಿ ಬಳಸಿಕೊಂಡಿದ್ದ ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಮಗಳು ಕರೆ ಮಾಡಿದ್ದು, ಪತಿ ಚಿತ್ರ ಹಿಂಸೆ ಕೊಡುತ್ತಿದ್ದಾನೆ ಎಂದು ಹೇಳಿದ್ದಳು.
ಹೀಗಾಗಿ ಪಾಲಕರು ಶಶಿಧರ್ ವಿರುದ್ಧ ಶ್ರೀರಾಮ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತ್ಮಹತ್ಯೆ ಹಿಂದಿನ ರಹಸ್ಯ ಬೇಧಿಸಲು ತನಿಖೆ ನಡೆಸಿದ್ದಾರೆ. ರಾತ್ರಿ ಪಾಳಿಯ ಕೆಲಸವಿದೆ ಎಂದು ಪತ್ನಿಗೆ ಹೇಳಿ ಶಶಿಧರ್ ಮನೆಯಿಂದ ಹೊರ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಅನುಮಾನಗೊಂಡ ಕಾತ್ಯಾಯಿನಿ ಪತಿಯನ್ನು ಹಿಂಬಾಲಿಸಿ ಹೋದಾಗ ಪ್ರಿಯತಮೆಯ ಮನೆಯಲ್ಲಿ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದನಂತೆ. ಈ ವಿಚಾರದಿಂದಲೇ ದಂಪತಿ ಮಧ್ಯೆ ಕಲಹ ನಡೆಯಿತ್ತಿತ್ತು ಎಂದು ತಿಳಿದು ಬಂದಿದೆ. ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ.