ಬೆಂಗಳೂರು: ಲವ್ ಮಾಡಿ ಮದುವೆಯಾಗಿ ಅಮೆರಿಕದಲ್ಲಿ ವಾಸವಾಗಿದ್ದ ದಂಪತಿ ನಡುವೆ ಬಿರುಕು ಉಂಟಾಗಿ ಸುಪ್ರೀಂಕೋರ್ಟ್ ನಿಷೇಧದ ನಡುವೆಯೂ ಪತ್ನಿಗೆ ಪತಿರಾಯ ತಲಾಖ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಿರುಕುಳದಿಂದ ಮನನೊಂದು ಮಹಿಳೆಯೊಬ್ಬರು ಗಂಡ ಹಾಗೂ ಆತನ ಪೋಷಕರ ವಿರುದ್ಧ ಪತ್ನಿ ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುಎಸ್ಎನಲ್ಲಿ ಸಾಫ್ಟ್ ವೇರ್ ಕೆಲಸ ಮಾಡ್ತಿದ್ದ ಮಹಿಳೆ ಪ್ರೀತಿಸುತ್ತಿದ್ದ ಆರ್.ಟಿ.ನಗರ ನಿವಾಸಿ ಸೈಯದ್ ರೆಹಮಾನ್ ಜೊತೆ ಮದುವೆಯಾಗಿದ್ದರು. ವಿವಾಹವಾಗಿ ಮೂರು ತಿಂಗಳ ಬಳಿಕ ಯುಎಸ್ಎಗೆ ದಂಪತಿ ತೆರಳಿದ್ದರು. ಬಳಿಕ ತನ್ನ ವರಸೆ ಬದಲಾಯಿಸಿದ್ದ ಗಂಡ ಸೈಯದ್, ಹೆಂಡತಿ ದುಡಿಮೆ ಮಾಡಿ ತಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.
ಹೆಂಡತಿ ಮನೆಯಲ್ಲಿರುವಾಗಲೇ ಬೇರೆ ಯುವತಿಯರ ಜೊತೆ ಚಾಟಿಂಗ್ ನಡೆಸುವುದಲ್ಲದೆ ವಾಟ್ಸಾಪ್ ಕಾಲ್ ಮಾಡಿ ಮನೆಗೆ ಕರೆಸಿಕೊಳ್ಳುತ್ತಿದ್ದ ಸೈಯ್ಯದ್, ತನ್ನ ಅನಾಚಾರವನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಡನ ಬಗ್ಗೆ ಆತನ ತಂದೆ ತಾಯಿಗೆ ತಿಳಿಸಿದ್ದು, ಆತ ಗಂಡಸು ನೀನು ಮಹಿಳೆ ಅನುಸರಿಸಿಕೊಂಡು ಹೋಗು ಎಂದು ನುಣುಚಿಕೊಂಡಿದ್ದಾರೆ.
ಗಂಡನ ವರ್ತನೆಯಿಂದ ಬೇಸತ್ತು ಮಹಿಳೆ ಬೆಂಗಳೂರಿನ ತಾಯಿ ಮನೆಗೆ ಬಂದಿದ್ದು, ಇತ್ತ ರೆಹಮಾನ್ ಹೆಸರು ಬದಲಾಯಿಸಿ ಬೇರೊಂದು ಮದುವೆಯಾಗಿರುವುದಾಗಿ ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ. ಮೊದಲ ಪತ್ನಿಗೆ ಎರಡನೇ ಮದುವೆ ವಿಚಾರ ಗೊತ್ತಾಗುತ್ತಿದ್ದಂತೆ ಪತ್ನಿ ಮನೆಗೆ ಬಂದು ತಲಾಕ್ ಹೇಳಿದ್ದಾನೆ. ಇದರಿಂದ ಮನನೊಂದು ಗಂಡ ಹಾಗೂ ಆಕೆಯ ಮನೆಯವರ ಮೇಲೆ ಆರ್ ಟಿ ನಗರ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಆದರೂ ಪತಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.