ಬೆಂಗಳೂರು: ಪ್ರೀತಿಸಿ ಮದುವೆಯಾದ ಮೂರೇ ದಿನದ ಅಂತರದಲ್ಲಿ ಪತಿ ತನ್ನಿಂದ ದೂರವಾಗಿದ್ದಾನೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರಣಿ ಎಂಬಾಕೆ ಕೆ.ಆರ್.ಪುರ ಠಾಣೆಗೆ ದೂರು ನೀಡಿ ಒತ್ತಾಯಿಸಿದ್ದಾರೆ.
"ಕೆಲವು ವರ್ಷಗಳಿಂದ ನಾನು ಸುರೇಶ್ ಪ್ರೀತಿಸುತ್ತಿದ್ದೆವು. ಫೆ.13 ರಂದು ದೇವಸ್ಥಾನವೊಂದರಲ್ಲಿ ಮದುವೆಯಾದೆವು. ವಿವಾಹವಾದ ಮೂರು ದಿನಗಳ ಬಳಿಕ ಅಂದರೆ ಫೆ. 17 ರಂದು ನನ್ನ ಬಿಟ್ಟು ದೂರವಾಗಿದ್ದಾನೆ. 18 ರಂದು ಮನೆಗೆ ಬಂದು ಕರೆದುಕೊಂಡು ಹೋಗಿರುವುದಾಗಿ ಭರವಸೆ ನೀಡಿದ್ದ ಸುರೇಶ್ ಈವರೆಗೂ ಪತ್ತೆಯಾಗಿಲ್ಲ." ಎಂದು ತಿಳಿಸಿದ್ದಾರೆ.
ಸುರೇಶ್-ಧರಣಿ ವಿವಾಹವಾದ ಫೋಟೋಗಳು ವೈರಲ್ ಆಗಿವೆ. ಮದುವೆ ಫೋಟೋಗಳು ಶಾರ್ಟ್ ಮೂವಿಗಾಗಿ ತೆಗೆದುಕೊಂಡಿದ್ದು, ಧರಣಿ ಜತೆ ನನ್ನ ವಿವಾಹವಾಗಿಲ್ಲ. ಆಕೆಗೆ ಕೇವಲ ಸ್ನೇಹಿತನಾಗಿದ್ದೆ ಅಷ್ಟೇ" ಎಂದು ಸುರೇಶ್ ಹೇಳಿರುವುದಾಗಿ ತಿಳಿದು ಬಂದಿದೆ.
"ನನಗೆ 2016ರಲ್ಲಿ ಮದುವೆಯಾಗಿತ್ತು. ಕೌಟುಂಬಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದೆ. ಈ ವಿಚಾರ ಸುರೇಶ್ಗೆ ಗೊತ್ತಿತ್ತು. ಎಲ್ಲಾ ವಿಚಾರಗಳನ್ನು ಮಾತುಕತೆ ನಡೆಸಿ ಪ್ರೀತಿಸಿ ಮದುವೆಯಾಗಿದ್ದೆವು. ಆದರೆ ವಿವಾಹವಾಗಿ ಮೂರೇ ದಿನಗಳ ಅಂತರದಲ್ಲಿ ತನ್ನಿಂದ ದೂರವಾಗುತ್ತಾನೆ ಎಂದು ಗೊತ್ತಿರಲಿಲ್ಲ" ಎಂದು ಧರಣಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.
ನವವಿವಾಹಿತೆ ಸಾವು: ವಿವಾಹವಾಗಿ ಮೂರೇ ದಿನಕ್ಕೆ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ಕೊಡಗಿನಲ್ಲಿ ವರದಿಯಾಗಿತ್ತು. ಜಿಲ್ಲೆಯ ಕುಶಾಲನಗರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಅಕ್ಷತಾ (18) ಮೃತರು. ಹೊಸಕೋಟೆಯ ದಶರಥ ಹಾಗೂ ಗಿರಿಜಾ ಎಂಬುವವರ ಪುತ್ರ ಹೇಮಂತ್ ಅಕ್ಷತಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ವಿವಾಹಕ್ಕೆ ಜಾತಿ ವಿಚಾರ ಅಡ್ಡ ಬಂದಿತ್ತು. ಹೇಮಂತ್ ಮನೆಯವರು ನಮ್ಮ ಮಗಳನ್ನು ಕೊಂದಿದ್ದಾರೆ ಎಂದು ಮೃತ ಅಕ್ಷತಾಳ ಪೋಷಕರು ಆರೋಪಿಸಿ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ಸಾವು: ಕೊಲೆ ಆರೋಪ
ಪತ್ನಿ ಪರಾರಿ: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ವ್ಯಕ್ತಿಯನ್ನು ನಂಬಿ ಪತ್ನಿ ಮನೆಬಿಟ್ಟು ಹೋಗಿದ್ದಾಳೆಂದು ಪತಿಯೊಬ್ಬ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. 39 ವರ್ಷದ ವ್ಯಕ್ತಿಯೊಬ್ಬ ಇತ್ತೀಚೆಗೆ ಯಶವಂತಪುರ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ದೂರುದಾರ ಸಿಸಿಟಿವಿ ಇನ್ಸ್ಟಾಲೇಷನ್ ವೃತ್ತಿ ಮಾಡಿಕೊಂಡಿದ್ದು 9 ವರ್ಷಗಳ ಹಿಂದೆ ಜಾರ್ಖಂಡ್ ಮೂಲದ ಯುವತಿಯೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಇತ್ತೀಚೆಗೆ ಆನ್‌ಲೈನ್ ಆ್ಯಪ್ಗಳಲ್ಲಿ ಹಾಡು ಹಾಡುವುದು, ರೀಲ್ಸ್ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದ ದೂರುದಾರನ ಪತ್ನಿಗೆ ದೆಹಲಿ ಮೂಲದ ದೀಪಕ್ ಮೆಹ್ರಾ ಎಂಬಾತನ ಪರಿಚಯವಾಗಿತ್ತಂತೆ.
ನಿತ್ಯ ವಿಡಿಯೋ ಕರೆಯಲ್ಲಿ ಮಾತನಾಡುವುದು, ಇತ್ತೀಚೆಗೆ ಬೆಂಗಳೂರಿಗೆ ಬಂದು ತನ್ನ ಪತ್ನಿಯನ್ನು ಭೇಟಿಯಾಗಿರುವುದನ್ನು ಗಮನಿಸಿದ್ದ ದೂರುದಾರ ಪತ್ನಿಗೆ ಬೈದು ಬುದ್ಧಿವಾದ ಹೇಳಿದ್ದನಂತೆ. ಆದರೆ ಜನವರಿ 26ರಂದು ಸಂಜೆ ಪತಿ ಮಲಗಿದ್ದಾಗ ಇಬ್ಬರು ಮಕ್ಕಳಲ್ಲಿ ಒಬ್ಬ ಮಗನನ್ನು ಕರೆದುಕೊಂಡು ಪತ್ನಿ ಮನೆಬಿಟ್ಟು ಹೋಗಿದ್ದಾಳೆ ಮತ್ತು ಹೋಗುವಾಗ ನಮ್ಮಿಬ್ಬರ ಮೊಬೈಲ್ ಫೋನ್‌ಗಳನ್ನು ನೀರಿನಲ್ಲಿ ಎಸೆದು ಹೋಗಿದ್ದಾಳೆ ಎಂದು ಪತಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನ ಜೊತೆ ಪತ್ನಿ ಪರಾರಿ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ