ಬೆಂಗಳೂರು: ಕುಡಿಯಲು ಹಣ ಕೊಡಲಿಲ್ಲವೆಂದು ಕಲ್ಲು ಎತ್ತಿ ಹಾಕಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ಕುರುಬರ ಹಳ್ಳಿಯಲ್ಲಿ ನಡೆದಿದೆ.
ಸಿದ್ದಮ್ಮ ಕೊಲೆಯಾದ ದುರ್ದೈವಿ. ಇವರು ಕಳೆದೊಂದು ವರ್ಷದ ಹಿಂದೆ ಕಲಬುರಗಿಯಿಂದ ತನ್ನ ಕುಟುಂಬ ಸಮೇತ ಬೆಂಗಳೂರಿನ ಕುರುಬರ ಹಳ್ಳಿಗೆ ಬಂದು ನೆಲೆಸಿದ್ದರು. ಸಿದ್ದಮ್ಮ, ಗಂಡ ಮಲ್ಲಣ್ಣ ಹಾಗೂ ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಂದು ಮಧ್ಯಾಹ್ನ ಮಲ್ಲಣ್ಣ ಸಿದ್ದಮ್ಮಳಿಗೆ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ಹಣ ನೀಡಲು ನಿರಾಕರಿಸಿದಕ್ಕೆ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.
![Husband killed wife by hitting stone](https://etvbharatimages.akamaized.net/etvbharat/prod-images/5258943_sh.jpg)
ನಿನ್ನೆ ರಾತ್ರಿಯಿಂದ ಮಲ್ಲಣ್ಣ, ಸಿದ್ದಮ್ಮಳ ಬಳಿ ಕುಡಿಯಲು ಹಣ ಕೇಳುತ್ತಿದ್ದ. ಆದರೆ, ಮಲ್ಲಣ್ಣನಿಗೆ ಕ್ಯಾನ್ಸರ್ ಖಾಯಿಲೆ ಇರುವುದರಿಂದ ಸಿದ್ದಮ್ಮ ಹಣ ನೀಡಿರಲಿಲ್ಲ. ಇಂದು ಮುಂಜಾನೆಯಿಂದಲೂ ಹಣಕ್ಕಾಗಿ ಸತಾಯಿಸಿ ಮಲ್ಲಣ್ಣ ಗಲಾಟೆ ಮಾಡಿದ್ದಾನೆ. ಹಣ ಕೊಡದೇ ಇದ್ದಾಗ ಸಿದ್ದಮ್ಮಳ ತಲೆಗೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಲ್ಲಣ್ಣನನ್ನ ಬಂಧಿಸಿದ್ದಾರೆ.