ಬೆಂಗಳೂರು: ಹೆಂಡತಿಯ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದ ಗಂಡನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಖಲೀಂ ಷರೀಫ್ (48) ಬಂಧಿತ ಆರೋಪಿ. ನಜ್ನೀನ್ ಎಂಬ ಮಹಿಳೆ ಕೊಲೆಯಾದವರು. ಈ ದಂಪತಿ ಜೆ.ಪಿ.ನಗರದ ವಿಕಾಸ್ ಎನ್‌ಕ್ಲೇವ್ ಎಂಬ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಇದೇ ಫ್ಲ್ಯಾಟ್ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.
ಬಟ್ಟೆ ವ್ಯಾಪಾರ ಮಾಡುತ್ತಿದ್ದ ಖಲೀಂ ದಂಪತಿಗೆ ಐದು ಮಕ್ಕಳಿದ್ದಾರೆ. ಹಣಕಾಸು ವಿಚಾರಕ್ಕಾಗಿ ಪ್ರತಿ ದಿನ ಇಬ್ಬರ ನಡುವೆ ಜಗಳವಾಗುತ್ತಿತ್ತಂತೆ. ಇದರ ಜತೆಗೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಖಲೀಂ, ದಿನಗಳುರುಳಿದಂತೆ ವಿಚ್ಚೇಧನ ಪಡೆಯಲು ನಿರ್ಧರಿಸಿದ್ದಾನೆ. ಇದರಂತೆ ಬುಧವಾರ ಬೆಳಗ್ಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಮಸೀದಿಗೆ ತೆರಳಿದ ಇಬ್ಬರೂ ತಲಾಕ್ ತೆಗೆದುಕೊಂಡು ಮನೆಗೆ ಬಂದಿದ್ದಾರೆ. ಇಷ್ಟಾದರೂ ಪತ್ನಿ ಮೇಲೆ ಖಲೀಂ ಮತ್ತೆ ಕ್ಯಾತೆ ತೆಗೆದಿದ್ದಾನೆ. ಮಾತಿನ ಚಕಮಕಿ ತಾರಕಕ್ಕೇರಿ ಚಾಕುವಿನಿಂದ ಪತ್ನಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.