ಬೆಂಗಳೂರು: ಪರಿಸರಕ್ಕೆ ಹಾನಿಯಾಗದಂತೆ ದೇಶದಲ್ಲಿ ಉದ್ಯೋಗ ಸೃಷ್ಟಿಸಿ ಆರ್ಥಿಕತೆ ಸುಧಾರಣೆ ಮಾಡಿ ಎಂಬ ಬೇಡಿಕೆ ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿದ್ದಾರೆ.
ಗ್ರಾಮ ಸೇವಾ ಸಂಘದ ವತಿಯಿಂತ ಕಳೆದ ಹತ್ತು ದಿನದಿಂದ ಸತ್ಯಾಗ್ರಹದ ಚಳುವಳಿ ನಡೆಸಲಾಗುತ್ತಿದ್ದು, ಗಾಂಧಿ ಭವನದ ಬಳಿ ಇಂದು ಉಪವಾಸ ಸತ್ಯಾಗ್ರಹ ಆರಂಭಿಸಲಾಯ್ತು. ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಆರ್ಥಿಕ ತಜ್ಞ ಡಾ. ವಿನೋದ್ ವ್ಯಾಸುಲು, ಕಾರ್ಮಿಕ ಮುಖಂಡ ಅನಂತ್ ರಾಮು, ರಂಗಕರ್ಮಿಗಳು, ಗುಡಿ ಕೈಗಾರಿಕೆಯ ಕಾರ್ಮಿಕರು ಇದಕ್ಕೆ ಸಾಥ್ ನೀಡಿದರು.
ದೇಶದಾದ್ಯಂತ ಪ್ರತಿನಿತ್ಯ ಸರಾಸರಿ ಮೂರು ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಪ್ರಕೃತಿ ವಿಕೋಪ ಜನರನ್ನು ಬೀದಿಗೆ ತಂದಿದೆ. ಇವೆಲ್ಲದರ ವಿರುದ್ಧ ಹಾಗೂ ರಾಕ್ಷಸ ಆರ್ಥಿಕತೆಯ ವಿರುದ್ಧ ಪವಿತ್ರ ಆರ್ಥಿಕತೆ ಆರಂಭವಾಗಲಿ ಎಂಬ ಉದ್ದೇಶವಿಟ್ಟುಕೊಂಡು ಈ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಉಪವಾಸದಿಂದ ಪ್ರಾಣ ಬಿಡುವ ಪರಿಸ್ಥಿತಿ ಬಂದರೂ ಇದಕ್ಕೆ ಯಾರೂ ಕಾರಣವಲ್ಲ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಪವಿತ್ರ ಆರ್ಥಿಕತೆಯ ನೀತಿ ರೂಪಿಸಲು ಗ್ರಾಮ ಸೇವಾ ಸಂಘದ ಆರ್ಥಿಕ ತಜ್ಞರು ಸಹಕರಿಸಲಿದ್ದಾರೆ ಎಂದರು.
ಪವಿತ್ರ ಆರ್ಥಿಕತೆಯಲ್ಲಿ 60% ಮಾನವ ಶ್ರಮ ಹಾಗೂ 40% ಸ್ವಯಂಚಾಲಿತ ಯಂತ್ರಗಳನ್ನು ಬಳಸಿ, 60% ಸ್ಥಳೀಯ ಸಂಪನ್ಮೂಲ, ಗರಿಷ್ಠ 40% ಹೊರಗಡೆಯ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ ಮಾಡುವುದು. ರಾಕ್ಷಸ ಆರ್ಥಿಕತೆಯು ಅಪಾಯಕಾರಿಯಾದ ವ್ಯವಸ್ಥೆ ಎಂದರು. ಹೀಗಾಗಿ ಹೆಚ್ಚೆಚ್ಚು ಪವಿತ್ರ ಆರ್ಥಿಕತೆಯನ್ನು ಸರ್ಕಾರ ಬೆಂಬಲಿಸಬೇಕು ಎಂದರು.