ಬೆಂಗಳೂರು: ಸಮುದಾಯದ ಹೋರಾಟದ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣವನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬನ್ನಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಕೊಡುವಂತೆ ಆಗ್ರಹಿಸಿ ನಡೆದ ಕುರುಬ ಸಮುದಾಯದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ಹೋರಾಟ ಅಂದರೆ ಎಲ್ಲರೂ ಒಗ್ಗಟ್ಟಾಗಬೇಕು. ಸಮುದಾಯದ ಹೋರಾಟದ ನೇತೃತ್ವ ವಹಿಸಿರೋದು ಪೂಜ್ಯ ಸ್ವಾಮೀಜಿಗಳು. ರಾಜಕೀಯ ನಾಯಕರುಗಳು ನೇತೃತ್ವ ವಹಿಸಿಲ್ಲ ಎಂದರು.
ಎಸ್ಟಿಗೆ ಸೇರಬೇಕೆನ್ನುವುದು ಮೂರನೇ ಆಶಯ :
ಸಭೆಯಲ್ಲಿ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡುತ್ತಾ, ಈಶ್ವರಪ್ಪ ಸರ್ಕಾರದಲ್ಲಿ ಮಂತ್ರಿಯಾಗಿದ್ದರೂ ಈ ಹೋರಾಟದ ನೇತೃತ್ವವಹಿಸಿದ್ದಾರೆ. ನಮ್ಮ ಸಮುದಾಯ ಎಸ್ಟಿ ಸಮುದಾಯಕ್ಕೆ ಸೇರಬೇಕು ಅನ್ನೋದು ಮೂರನೇ ಆಶಯ. ಮೊದಲ ಆಶಯ ಧಾರ್ಮಿಕ ನೆಲೆ ತೋರಿಸಬೇಕು, ಕಾಗಿನೆಲೆ ಪೀಠ ಸ್ಥಾಪಿಸಿದ್ದು ಮೊದಲ ಯಶಸ್ಸು ಎಂದು ತಿಳಿಸಿದರು.
ಜನತಾಂತ್ರಿಕ ವ್ಯವಸ್ಥೆಯಲ್ಲಿ ಒಂದು ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದಾಯ್ತು. ಇದೀಗ ಎಸ್ಟಿ ಮೀಸಲಾತಿಗೆ ಹೋರಾಟ ಮಾಡಲಾಗುತ್ತಿದೆ. ಇದು ನಮ್ಮ ಕುರುಬರಿಗೆ ನ್ಯಾಯ ಸಿಗುವುದಕ್ಕಾಗಿಯೇ ಹೊರತು, ಬೇರೆ ಯಾರ ವಿರುದ್ಧದ ಹೋರಾಟವಲ್ಲ. ದೇವರಾಜ್ ಅರಸ್ ಕೊಟ್ಟ ಹಾವನೂರ್ ವರದಿ ಬಿಟ್ಟರೆ ಇನ್ಯಾವುದೇ ವರದಿ ಮೇಲಕ್ಕೆ ಹೋಗಲೇ ಇಲ್ಲ. ಕುರುಬರು ದೇಶಕ್ಕಲ್ಲ, ಈ ಭೂಮಿಗೆ ಮೂಲ ನಿವಾಸಿಗಳು. ರಾಜ್ಯ ಸರ್ಕಾರ ಎಸ್ಟಿ ಮೀಸಲು ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಲಿ ಎಂದು ಆಗ್ರಹಿಸಿದರು.
ಕುರುಬರಿಂದ ಬಿಎಸ್‌ವೈ ಸಿಎಂ ಆಗಿದ್ದಾರೆ: ಸಭೆಯಲ್ಲಿ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ಇವತ್ತು ಯಡಿಯೂರಪ್ಪ ಸಿಎಂ ಆಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದಕ್ಕೆ ಕಾರಣ ಕುರುಬ ಸಮುದಾಯ. ಕುರುಬ ಸಮುದಾಯದ ಬೆಂಬಲದಿಂದ ನಾನು, ವಿಶ್ವನಾಥ್, ಆರ್.ಶಂಕರ್ ಕಂಬಳಿ ಬೀಸಿದ್ದೇ ಕಾರಣ ಎಂದು ತಿಳಿಸಿದರು.
ಈಶ್ವರಪ್ಪ ಕೂಡ ಇವತ್ತು ಸಚಿವರಾಗಿದ್ದರೆ ಅದಕ್ಕೆ ಕುರುಬ ಸಮುದಾಯದ ನಾಯಕರ ಬೆಂಬಲವೇ ಕಾರಣ. ಹೀಗಾಗಿ ಬಿಜೆಪಿ ಮೇಲೆ ನಂಬಿಕೆ ಇಟ್ಟೇ ನಾವು ಪಕ್ಷಕ್ಕೆ ಬಂದಿದ್ದೇವೆ. ಇದನ್ನು ನೆನಪಿಟ್ಟು ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಎಸ್ಟಿ ಮೀಸಲಾತಿ ಹೋರಾಟ ನಿರಂತರ: ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಎಸ್ಟಿ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ ಎಂದರು. ಹೋರಾಟ ಸಂಬಂಧ ವಿಭಾಗ ಮಟ್ಟದ ಸಮಾವೇಶ ಆಯೋಜಿಸಲಾಗುತ್ತದೆ. ನವೆಂಬರ್ 22 ರಂದು ಬೆಳಗಾವಿ ವಿಭಾಗದಲ್ಲಿ ಸಮಾವೇಶ ಕೈಗೊಳ್ಳಲಾಗುವುದು. ಮೈಸೂರು ವಿಭಾಗದಲ್ಲಿ ಡಿ.6, ಡಿ.20 ರಂದು ಕಲಬುರಗಿ ವಿಭಾಗದ ಸಮಾವೇಶ, ಜನವರಿ 3 ರಂದು ಬೆಂಗಳೂರು ವಿಭಾಗದ ಸಮಾವೇಶ ನಡೆಯಲಿದೆ ಎಂದರು.
ವಿಭಾಗವಾರು ಸಮಾವೇಶಗಳ ಮಧ್ಯೆಯೇ ದೆಹಲಿಗೆ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರಮುಖರ ನಿಯೋಗ ಹೋಗಲಿದೆ. ಕೇಂದ್ರದೆದುರು ನಮ್ಮ ಬೇಡಿಕೆ ಇಡಲು ಈಶ್ವರಪ್ಪ ನೇತೃತ್ವದಲ್ಲಿ ನಿಯೋಗ ಹೋಗಲಿದೆ. ಜನವರಿ 15 ರಂದು ಮಕರ ಸಂಕ್ರಾಂತಿ, ಸೂರ್ಯ ದಿಕ್ಕು ಬದಲಿಸುವ ಸಮಯವಾಗಿದೆ. ಅಂದು ನಾಲ್ವರು ಹಿರಿಯ ಸ್ವಾಮೀಜಿಗಳು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಬರುತ್ತಾರೆ. ಜನವರಿ 15 ರಂದು ಎಸ್ಟಿ ಮೀಸಲಾತಿಗಾಗಿ ಸ್ವಾಮೀಜಿಗಳ ಪಾದಯಾತ್ರೆ ನಡೆಯಲಿದೆ. 2021 ರ ಫೆ. 7 ರಂದು ಬೆಂಗಳೂರಿನಲ್ಲಿ ಎಸ್ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತದೆ ಎಂದರು.
ಸಿದ್ದರಾಮಯ್ಯ ಗೈರು: ಕುರುಬ ಸಮುದಾಯದ ಬೃಹತ್ ಚಿಂತನಾ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗಿದ್ದರು. ಇತ್ತೀಚೆಗೆ ನಡೆದ ಸಮುದಾಯದ ಸಭೆಗಳಿಗೆಲ್ಲ ಸಿದ್ದರಾಮಯ್ಯ ಗೈರಾಗಿದ್ದರು.
ಈ ಸಂಬಂಧ ಸ್ಪಷ್ಟೀಕರಣ ನೀಡಿದ ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ, ಈ ಸಭೆಗೆ ಸಿದ್ದರಾಮಯ್ಯ ಬಂದಿಲ್ಲ ಅಂತ ಹೇಳೋರೂ ಇದ್ದಾರೆ. ಸಿದ್ದರಾಮಯ್ಯ ಸಭೆಗೆ ಬರದಿದ್ದರೂ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಸಮುದಾಯದ ಸ್ವಾಮೀಜಿಗಳು, ಈಶ್ಚರಪ್ಪ ಇತರೆ ನಾಯಕರು ಸಿದ್ದರಾಮಯ್ಯ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿ. ಎಸ್ಟಿ ವರ್ಗಕ್ಕೆ ಸೇರಲು ಕುರುಬ ಸಮುದಾಯದ ಜತೆ ಇತರೇ ಹಿಂದುಳಿದ ಸಮುದಾಯಗಳೂ ಆಗ್ರಹಿಸುತ್ತಿವೆ. ಒಬ್ಬ ಸಿಎಂ ಆಗಿದ್ದ ಸಿದ್ದರಾಮಯ್ಯ ಒಂದೇ ಸಮುದಾಯ ಬೆಂಬಲಿಸೋಕೆ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.