ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ಕೂಡ ಅದರದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಇಂತಹ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಕೂಡ ಒಂದಾಗಿದೆ. ಇದನ್ನು ಇಡೀ ವರ್ಷವನ್ನೇ ಶಿವಮಯವನ್ನಾಗಿಸುವ, ಮಂಗಳಮಯವನ್ನಾಗಿಸುವ ಮಹೋತ್ಸವ, ಮಹಾಪರ್ವವೆಂದೇ ಶಿವಭಕ್ತರು ನಂಬುತ್ತಾರೆ.
ಮಾಘ ಮಾಸ ಕೃಷ್ಣಪಕ್ಷದ ಚತುರ್ದಶಿ ತಿಥಿಯನ್ನು ಮಹಾಶಿವರಾತ್ರಿ ಎಂದು ಕರೆಯುತ್ತೇವೆ. ಶಿವರಾತ್ರಿಯಂದು ರಾತ್ರಿಯೆಲ್ಲಾ ಪರಮೇಶ್ವರನನ್ನು ಪೂಜಿಸುತ್ತಾ, ಸ್ಮರಿಸುತ್ತಾ ಆರಾಧನೆ ಮಾಡಲಾಗುತ್ತದೆ. ಲಿಂಗರೂಪಿ ಈಶ್ವರನಿಗೆ ಪಂಚಾಮೃತಾಭಿಷೇಕ, ಗಂಗಾಭಿಷೇಕ ಮಾಡಿ ತ್ರಿದಳ ಬಿಲ್ವಪತ್ರೆಗಳಿಂದ ಪೂಜಿಸಿ, ಸ್ತುತಿಸಿ, ಪಚಿತ್ರವಾದ ಪಂಚಾಕ್ಷರಿಮಂತ್ರವನ್ನು ಜಪಿಸುತ್ತ ಪರಶಿವನನ್ನು ಸಂತೋಷಗೊಳಿಸಿ, ಪರಮಾತ್ಮನಿಂದ ಇಷ್ಟ ವರಗಳನ್ನು ಪಡೆಯುವ ಸುವರ್ಣಸಂಧಿಕಾಲವೇ ಮಹಾಶೀವರಾತ್ರಿ ಎನ್ನುತ್ತಾರೆ ಡಾ.ರಾಘವೇಂದ್ರ ಮೋಕ್ಷಗುಂಡಮ್ ಗುರೂಜಿಯವರು.
ಶಿವರಾತ್ರಿ ಹಿನ್ನೆಲೆ: ಯಾವುದೇ ದೇವರನ್ನು ಆರಾಧಿಸುವಾಗ ಹಗಲು ಸಮಯವೇ ಪ್ರಾಮುಖ್ಯವಾದುದು. ಜಪತಪಾದಿಗಳು, ಹೋಮ ಹವನಾದಿಗಳು ಹೀಗೆ ಯಾವುದೇ ಪುಣ್ಯ ಕರ್ಮಗಳನ್ನು ಮಾಡಬೇಕಾದರೂ ಹಗಲು ವೇಳೆಯೇ ಶ್ರೇಷ್ಠವಾದದ್ದು. ಆದರೆ ಪರಶಿವನಿಗೆ ರಾತ್ರಿಯೇ ಪೂಜೆಯಾಗಬೇಕು. ಅಮಂಗಳವಾದ ಅಂದರೆ ಅಶಿವವಾದ ರಾತ್ರಿಯನ್ನು ಶಿವವನ್ನಾಗಿಸುವ, ಮಂಗಳವನ್ನಾಗಿಸುವ ಈಶ್ವರನ ಈ ಆರಾಧನೆಯ ಹಬ್ಬಕ್ಕೆ ಶಿವರಾತ್ರಿ ಎಂಬ ಹೆಸರುಬಂದಿದೆ. ಪರಮ ಮಂಗಳಮೂರ್ತಿಯಾದ ಸಚ್ಚಿದಾನಂದಸ್ವರೂಪಿ ಪರಮೇಶ್ವರನ ಸಂಬಂಧದಿಂದ ಅಮಗಳಸ್ವರೂಪವಾದ ರಾತ್ರಿಯೂ ಸಹ ಮಂಗಳವೇ ಆಗಿಬಿಡುವುದರಿಂದ ಇದು ಶಿವರಾತ್ರಿ ಹಬ್ಬವಾಯಿತು ಎಂಬುದು ಗುರೂಜಿಯವರ ಮಾತು.
ಶಿವರಾತ್ರಿಗೆ ವೇದಾಂತದ ಅರ್ಥ: ನಮ್ಮಲ್ಲಿ ಪ್ರತಿ ಹಬ್ಬಕ್ಕೂ, ಅನುಷ್ಠಾನಕ್ಕೂ ಸೂಕ್ಷ್ಮವಾದ ಆದ್ಯಾತ್ಮಿಕ ಅರ್ಥವಿದೆ. ಶಿವರಾತ್ರಿ ಹಬ್ಬಕ್ಕೂ ಕೂಡ ವೇದಾಂತದ ರಹಸ್ಯಾರ್ಥವಿದೆ. ಶಿವರಾತ್ರಿಯು ಶಿವನನ್ನು ಪೂಜಿಸಿ, ರಾತ್ರಿಯನ್ನು ಮಂಗಳವನ್ನಾಗಿಸುವ ಹಬ್ಬ. ಇಲ್ಲಿ ಶಿವನೆಂದರೆ, ದ್ವೈತಪ್ರಪಂಚದ ಸೊಂಕೇ ಇಲ್ಲದಿರುವ ಗುಣಗಳ ಹಂಗಿಲ್ಲದ, ನಿರ್ಗುಣ ಪರಬ್ರಹ್ಮ. ರಾತ್ರಿ ಎಂದರೆ ಅವಿದ್ಯಾ ತಮಸ್ಸು. ಜ್ಞಾನಸ್ವರೂಪಿಯಾದ ಶಿವನೇ ತಾನೆಂದು ಅರ್ಥ ಮಾಡಿಕೊಂಡರೆ ಅವಿದ್ಯೆಯು ನಾಶವಾಗಿ ಜ್ಞಾನೋದಯವಾಗುವುದೇ ಶಿವರಾತ್ರಿಯಾಗಿದೆ.
ಶಿವರಾತ್ರಿ ದಿನ ಮಾಡುವ ಮೂರು ಕರ್ತವ್ಯಗಳು: ಎಲ್ಲ ಹಬ್ಬಗಳಂತೆ ಶಿವರಾತ್ರಿಗೂ ಕೆಲ ವ್ರತ ನಿಯಮಗಳಿವೆ. ಶಿವರಾತ್ರಿಯಂದು ಶಿವಪೂಜೆ, ಉಪವಾಸ ಹಾಗೂ ಜಾಗರಣೆಗಳು ಮಹತ್ವ ಪಡೆದಿವೆ.
ಶಿವಪೂಜೆ: ಶಿವಾಲಯಗಳಿಗೆ ಹೋಗಿ ಅಥವಾ ತಮ್ಮ ಮನೆಗಳಲ್ಲಿಯೇ ಶಿವಲಿಂಗವನ್ನಿಟ್ಟು ಅದಕ್ಕೆ ಅಭಿಷೇಕ, ಅಷ್ಟೋತ್ತರ ಸ್ರನಾಮ ಪೂಜೆ ಯಥಾಶಕ್ತಿ ಮಾಡಬಹುದು. ಬಿಲ್ವದಳಗಳಿಂದ ಪೂಜಿಸಿದರೆ ತುಂಬಾ ಶ್ರೇಷ್ಠ. ಸಂಜೆ 6 ಗಂಟೆಯಿಂದ ಮಾರನೇ ದಿನ 6 ಗಂಟೆವರೆಗೂ ಪೂಜೆ ಮಾಡಿರಿ.
ಜಾಗರಣೆ: ಶಿವರಾತ್ರಿಯಂದು ರಾತ್ರಿಯೆಲ್ಲ ಶಿವನ ಪೂಜೆ ಮಾಡುತ್ತ ಪಂಚಾಕ್ಷರಿ ಮಂತ್ರ ಜಪಿಸುತ್ತ, ಶಿವನ ಧ್ಯಾನದಲ್ಲಿಯೇ ಮಗ್ನರಾಗಿರಬೇಕು. ರಾತ್ರಿ ಮಲಗಬಾರದು, ಪರಮೇಶ್ವರನ ಪೂಜೆ ಮಾಡುವುದರಿಂದ ನಿದ್ರೆಯೂ ಬರುವುದೇ ಇಲ್ಲ.
ಉಪವಾಸ: ಶಿವರಾತ್ರಿಯಂದು ಮುಸುರೆ, ಬೇಯಿಸಿದ ಆಹಾರವನ್ನಾಗಲಿ ತಿನ್ನಬಾರದು. ಕೇವಲ ಹಾಲು, ಹಣ್ಣು ಮಾತ್ರ ಲಘುವಾಗಿ ಸ್ವೀಕರಿಸಬೇಕು. ಶಕ್ತಿ ಸಾಮರ್ಥ್ಯಗಳಿದ್ದರೆ ಇದನ್ನೂ ತೆಗೆದುಕೊಳ್ಳದೆ, ನೀರನ್ನು ಮಾತ್ರ ಕುಡಿದು ಇರಬೇಕು. ಹೀಗೆ ಈ ಮೂರನ್ನೂ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಅದು ಅನ್ವರ್ಥ ಶಿವರಾತ್ರಿಯಾಗುತ್ತದೆ ಎನ್ನುತ್ತಾರೆ ರಾಘವೇಂದ್ರ ಮೋಕ್ಷಗುಂಡಮ್ ಗುರೂಜಿಯವರು.
ಶಿರಾತ್ರಿಯಂದು ಮಾಡಬೇಕಾದ 10 ಅನುಷ್ಠಾನಗಳು: ಮಹಾಶಿವರಾತ್ರಿಯಂದು ಈ 10 ಅನುಷ್ಠಾನಗಳನ್ನು ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ.
- ಉಷಃಕಾಲದಲ್ಲಿ ಏಳುವಾಗಲೇ 'ಓಂ ನಮಃ ಶಿವಾಯ' ಎಂದು ಉಚ್ಚರಿಸುತ್ತ, ಶ್ರೀರಾಮ ಜಯರಾಮ ಜಯಜಯರಾಮ ಎಂದು ಶ್ರೀರಾಮಚಂದ್ರನನ್ನು ಸ್ಮರಿಸುತ್ತ ಏಳಬೇಕು
- ಶೌಚಾದಿಗಳನ್ನು ಮುಗಿಸಿ, ಸ್ನಾನಸಂಧ್ಯಾದಿ ನಿತ್ಯಕರ್ಮ ಮಾಡಬೇಕು
- ಹೆಚ್ಚು ಮೌನಿಯಾಗಿದ್ದು ಶಿವನ ಮಂತ್ರಗಳನ್ನು ಪಠಿಸುತ್ತಿರಬೇಕು
- ಬೇಯಿಸಿದ, ಮುಸುರೆ, ಅನ್ನ ಆಹಾರವನ್ನು ತೆಗೆದುಕೊಳ್ಳಬಾರದು
- ಹಸಿವನ್ನು ನೀಗಿಸಿಕೊಳ್ಳಲು ಹಾಲು, ಹಣ್ಣು ಮುಂತಾದ ಲಘು ಆಹಾರ ಮಾತ್ರ ಹಿತಮಿತವಾಗಿ ಸೇವಿಸಿರಿ
- ಸಂಜೆ ಸೂರ್ಯಾಸ್ತಮಾನದ ಸಮಯಕ್ಕೆ ಪುನಃ ಸ್ನಾನ ಮಾಡಿ, ಮಡಿಬಟ್ಟೆ ಧರಿಸಿ, ವಿಭೂತಿ ಹಾಕಿಕೊಂಡು ಸಂಧ್ಯಾವಂದನೆ ಮಾಡಿ, ಬಳಿಕ ಶಿವಪೂಜೆಯಲ್ಲಿ ತೊಡಗಿಸಿಕೊಳ್ಳಿರಿ
- ಭಸ್ಮ, ಪಂಚಾಮೃತ ಹಾಗೂ ಶುದ್ಧೋದಕದಿಂದ ಅಭಿಷೇಕ ಮಾಡಿದ ಬಳಿಕ ತ್ರಿದಳ ಬಿಲ್ವಪತ್ರೆಗಳಿಂದ ಅಷ್ಟೋತ್ತರ ಶತ, ಸಹಸ್ರನಾಮಗಳಿಂದ ಶೃದ್ಧೆಯಿಂದ ಪೂಜೆ ಮಾಡಿರಿ
- ಇಡೀ ರಾತ್ರಿ ಎಚ್ಚರವಾಗಿದ್ದು ಶಿವನ ಮಂತ್ರ, ಶಿವನ ಸ್ತೋತ್ರ ಶಿವನ ಭಜನೆ, ಶಿವನಾಮ ಸ್ಮರಣೆಗಳನ್ನು ಶೃದ್ಧೆಯಿಂದ ಮಾಡಬೇಕು
- ಸಂಜೆ 6ರಿಂದ ಮಾರನೆ ದಿನ ಬೆಳಗ್ಗೆ 6ರವರೆಗೂ ಶಿವನನ್ನೇ ಸ್ಮರಿಸುತ್ತ ಉಪವಾಸ ಇರಬೇಕು
- ನಾಲ್ಕು ಜಾವಗಳಲ್ಲೂ ಶಿವನಿಗೆ ಅಭಿಷೇಕ ಮಾಡಬೇಕು
- ಶಿವನ ಗುಣಲೀಲೆಗಳನ್ನು ಧ್ಯಾನಮಾಡುತ್ತ ಶಿವನ ಚಿಂತನೆಯಲ್ಲಿಯೇ ಮಗ್ನರಾಗಿರಬೇಕು. ಮಾರನೇ ದಿನ ಅವಭೃತ ಸ್ನಾನ ಮಾಡಿ, ನಂತರ ಸಮಧ್ಯಾದಿ ಪೂರೈಸಿ, ಬಳಿಕ ಲಘು ಉಪಹಾರವನ್ನೋ ಊಟವನ್ನೋ ಸೇವಿಸಬೇಕು.