ಬೆಂಗಳೂರು: ಗಳಿಸಿದ್ದನ್ನು ಕೂಡಿಟ್ಟು ಆಸ್ತಿ ಮಾಡಲು ಜನರು ಹರಸಾಹಸ ಪಡುವುದು ಸಾಮಾನ್ಯ. ಕೆಲವರಿಗೆ ಆಸ್ತಿ ಮಾಡುವ ಬಯಕೆ ಇರುತ್ತೆ, ಆದ್ರೆ ನೋಂದಾಯಿಸುವುದು, ಅದರ ಪ್ರಕ್ರಿಯೆ ಹೇಗೆ ಎಂದೆಲ್ಲಾ ಗೊತ್ತಿರುವುದಿಲ್ಲ. ಇಲ್ಲಿ ಚರಾಸ್ಥಿ ಹಾಗೂ ಪೂರ್ವಜರ ಆಸ್ತಿ ದಾಖಲಾತಿಯ ಬಗ್ಗೆ ಒಂದಿಷ್ಟು ಮಾಹಿತಿ ಇದೆ.
'ಸ್ಥಿರಾಸ್ತಿ' ಎಂಬ ಪದವನ್ನು ಸರಳವಾಗಿ ಹೇಳುವುದಾದರೆ, ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಿಸಲಾಗದೇ ಇರುವ ಆಸ್ತಿಯನ್ನೇ ಸ್ಥಿರಾಸ್ತಿ ಎಂದು ಕರೆಯಲಾಗುತ್ತದೆ. ಒಂದು ಸ್ಥಿರಾಸ್ತಿಯು ಮಾಲೀಕತ್ವದ ಹಕ್ಕುಗಳನ್ನು ಹೊಂದಿರುತ್ತದೆ. ಕಾನೂನಿನ ಪ್ರಕಾರ, ಆಸ್ತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಒಂದು ಪೂರ್ವಜ ಆಸ್ತಿ, ಮತ್ತೊಂದು ಸ್ವಾಧೀನಪಡಿಸಿಕೊಂಡಿರುವ ಆಸ್ತಿ.
ಕಾನೂನು ಪ್ರಕಾರ, ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳವರೆಗೆ ಆನುವಂಶಿಕವಾಗಿ ಪಡೆಯಲ್ಪಟ್ಟಿರುತ್ತದೆ. ಪೂರ್ವಿಕರ ಆಸ್ತಿಯಲ್ಲಿ ಪಾಲು ಮಾಡುವಿಕೆಯು ಹುಟ್ಟಿನಿಂದಲೇ ಉಂಟಾಗುತ್ತದೆ. ಪೂರ್ವಜರ ಆಸ್ತಿಯಲ್ಲಿ ತಂದೆ ಮತ್ತು ಮಗನ ಪಾಲಿರುತ್ತದೆ. ತಂದೆ (ಪೂರ್ವಿಕ ಆಸ್ತಿಯ ಪ್ರಸ್ತುತ ಮಾಲೀಕರು) ಮತ್ತು ಅವನ ಮಗನಿಗೆ ಆಸ್ತಿಯ ಮೇಲೆ ಸಮಾನ ಮಾಲಿಕತ್ವದ ಹಕ್ಕುಗಳಿವೆ.
ಸ್ಥಿರಾಸ್ತಿಯ ಮಾಲೀಕತ್ವ ಪಡೆಯುವು ಹೇಗೆ? ವಂಶಪಾರಂಪರ್ಯದಿಂದ ಬಂದ ಆಸ್ತಿಗಳನ್ನು ವಾರಸುದಾರರ ಹಕ್ಕಿನ ಮೂಲಕ ಪಡೆಯಬಹುದು. ಮರಣ ಶಾಸನ ಪತ್ರಗಳ (ಉಯಿಲು) ಮೂಲಕ, ಸ್ವರ್ಯಾಜನೆ ಮೂಲಕ ಖರೀದಿ, ದಾನ, ಟ್ರಸ್ಟ್, ವ್ಯವಸ್ಥಾಪನ ಪತ್ರ, ಸರ್ಕಾರದಿಂದ ಅನುದಾನ, ಇನಾಮು, ಕೋರ್ಟ್ ಡಿಕ್ರಿ ಮೂಲಕ ಆಸ್ತಿಯ ಮಾಲೀಕತ್ವವನ್ನು ಪಡೆಯಬಹುದಾಗಿದೆ.
ಅಂದರೆ ಆಸ್ತಿಯ ಮಾಲೀಕತ್ವವನ್ನು ಎರಡು ವಿಧದಲ್ಲಿ ಪಡೆಯುತ್ತಾರೆ. ಉದಾಹರಣೆ : ಖರೀದಿ, ದಾನ ಇತ್ಯಾದಿ ವ್ಯವಹಾರಗಳ ಮೂಲಕ. ಮತ್ತೊಂದು ಕಾನೂನಿನ ನಡವಳಿ ಮೂಲಕ ಅಂದ್ರೆ ಉದಾಹರಣೆ: ವಾರಸಾ, ಕೋರ್ಟ್ ಡಿಕ್ರಿ ಮೂಲಕ ಪಡೆದುಕೊಳ್ಳಬಹುದು.
ವಾರಸುದಾರರ ಹಕ್ಕಿನ ಮೂಲಕ ಬಂದ ಆಸ್ತಿಯ ಖಾತೆ ವರ್ಗಾವಣೆ ಮಾಡಿಸಿಕೊಳ್ಳಲು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆಯೇ? ಎಂಬ ಪ್ರಶ್ನೆ ಮೂಡಬಹುದು. ಆದರೆ, ನೋಂದಣಿ ಅಗತ್ಯವಿಲ್ಲ. ಆಸ್ತಿಯ ಮಾಲೀಕನ ಮರಣಾ ನಂತರ ಆತನ ಹೆಂಡತಿ ಮತ್ತು ಮಕ್ಕಳು ಅಂದರೆ ಗಂಡು ಮತ್ತು ವಿವಾಹಿತ/ ಅವಿವಾಹಿತ ಹೆಣ್ಣು ಮಕ್ಕಳು ನೇರ ವಾರಸುದಾರರಾಗುತ್ತಾರೆ.
ಮರಣ ಹೊಂದಿದ ವ್ಯಕ್ತಿಯ ಮರಣ ದೃಢೀಕರಣ (ಮರಣೋತ್ತರ) ಸರ್ಟಿಫಿಕೇಟ್ನೊಂದಿಗೆ ಆಸ್ತಿಯ ವಿವರಗಳನ್ನು ಮತ್ತು ಅರ್ಜಿಯನ್ನು ಪ್ರಮಾಣ ಪತ್ರದೊಂದಿಗೆ ಕೃಷಿ ಜಮೀನುಗಳಿದ್ದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರರಿಗೆ, ನಿವೇಶನ ಮನೆಗಳಾಗಿದ್ದಲ್ಲಿ ಆಸ್ತಿ ಇರುವ ಪ್ರದೇಶದ ಮಹಾನಗರ ಪಾಲಿಕೆ, ನಗರಸಭೆ, ಗ್ರಾಮ ಪಂಚಾಯಿತಿ, ಸಿಟಿ ಸರ್ವೆ ಇದ್ದಲ್ಲಿ ಸಿಟಿ ಸರ್ವೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ನಂತರ ಖಾತೆ ವರ್ಗಾವಣೆ ಮಾಡಿಸಿಕೊಳ್ಳಬಹುದು.
ಮರಣ ಶಾಸನ (ಉಯಿಲು)/ಇಚ್ಛಾ ಪತ್ರ ಎಂದರೇನು?: ಒಬ್ಬ ವ್ಯಕ್ತಿ ಮರಣಾ ನಂತರ ತನ್ನ ಆಸ್ತಿ ಯಾರಿಗೆ ಸಲ್ಲಬೇಕು ಎನ್ನುವುದನ್ನು ಬರೆದಿಡುವುದಕ್ಕೆ ಮರಣ ಶಾಸನ (ಉಯಿಲು) ಎನ್ನುತ್ತಾರೆ. ಮರಣ ಶಾಸನದ ಪ್ರಕಾರ ಆಸ್ತಿ ಯಾರಿಗೆ ಸೇರಬೇಕು ಎಂದು ಬರೆಯಲಾಗಿದೆಯೋ ಅವರಿಗೆ ಉಯಿಲು ಬರೆದ ವ್ಯಕ್ತಿಯ ಮರಣಾ ನಂತರ ಸೇರುತ್ತದೆ.
ಉಯಿಲು ಯಾರು ಬರೆದಿಡಬಹುದು?: 19 ವರ್ಷಗಳ ವಯಸ್ಸು ಮೀರಿದ ಮತ್ತು ಮಾನಸಿಕ ಸ್ವಾಸ್ಥ್ಯ ಹೊಂದಿರುವ ಯಾವುದೇ ವ್ಯಕ್ತಿ ಮರಣ ಶಾಸನ ಬರೆದಿಡಬಹುದು. ಆದರೆ, ಬೆದರಿಕೆ, ಮರಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಮಯದಲ್ಲಿ ಮಾಡಿದ ಮರಣ ಶಾಸನವು ಊರ್ಜಿತವಾಗುವುದಿಲ್ಲ. ಆದ್ದರಿಂದ ಮರಣ ಶಾಸನ ಮಾಡುವ ವ್ಯಕ್ತಿಯು ಸಂಪೂರ್ಣವಾಗಿ ಸ್ವಇಚ್ಛೆಯಿಂದ ಮಾಡುವಂತಿರಬೇಕು.
ಅಪ್ರಾಪ್ತ ವಯಸ್ಕರ, ಬುದ್ಧಿ ಭ್ರಮಣೆಯಾದವರ ಪರವಾಗಿ ಅವರ ಪಾಲಕರು ಅಥವಾ ಸಂರಕ್ಷಣೆದಾರರು ಮರಣ ಶಾಸನವನ್ನು ಮಾಡುವಂತಿಲ್ಲ. ಮರಣ ಶಾಸನಕ್ಕೆ ಕನಿಷ್ಠ ಇಬ್ಬರು ವ್ಯಕ್ತಿಗಳು ಸಾಕ್ಷಿಗಳೆಂದು ಸಹಿ ಮಾಡಬೇಕು. ಈ ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲಿ ಮರಣ ಶಾಸನ ಬರೆದುಕೊಡುವವರು ಸಹಿ ಮಾಡಿದಾರೆಂದು ಷರಾ ಬರೆಯಬೇಕು.
ಬಿಕ್ಕಲಂದಾರ (ಪತ್ರ ಬರಹಗಾರ) ಸಾಕ್ಷಿ ಆಗುವುದಿಲ್ಲ. ಈತನನ್ನು ಹೊರತುಪಡಿಸಿ ಇಬ್ಬರು ಸಾಕ್ಷಿಗಳು ಸಹಿ ಹಾಕಬೇಕು. ಮರಣ ಶಾಸನದದ ಮೂಲಕ ಪ್ರಯೋಜನ ಪಡೆಯುವ ವ್ಯಕ್ತಿಯು ಮರಣ ಶಾಸನಕ್ಕೆ ಸಾಕ್ಷಿ ಹಾಕಬಾರದು. ಯಾಕೆಂದರೆ ಮರಣ ಶಾಸನದ ಮೂಲಕ ಪಡೆಯುವ ಪ್ರಯೋಜನ ರದ್ದಾಗುತ್ತದೆ. ಮರಣ ಶಾಸನವು ವಿವಾದರಹಿತವಾಗಿ ಅನುಷ್ಠಾನಕ್ಕೆ ಬರಬೇಕಾದಲ್ಲಿ ಆಸ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಥತೆ ಅಥವಾ ಅಸ್ಪಷ್ಟತೆಗೆ ಅವಕಾಶ ಕೊಡದಂತೆ ಸ್ಪಷ್ಟವಾಗಿ ಸರಿಯಾಗಿ ಬರೆಯಬೇಕು ಹಾಗೂ ಆಸ್ತಿ ಪಡೆಯುವ ವ್ಯಕ್ತಿಗಳ ವಿವರಗಳನ್ನು ನಮೂದಿಸಬೇಕು.
ಮರಣ ಶಾಸನವನ್ನು ನೋಂದಾಯಿಸುವುದು ಕಡ್ಡಾಯವಾಗಿರುವುದಿಲ್ಲ. ಮರಣ ಶಾಸನ ಬರೆದಿಡುವವರು ಇಚ್ಛೆಪಟ್ಟಲ್ಲಿ ಭಾರತದ ಯಾವುದೇ ಉಪನೋಂದಣಿ ಅಧಿಕಾರಿ / ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮರಣ ಶಾಸನ (ಇಚ್ಛಾಪತ್ರ) ನೋಂದಾಯಿಸಬಹುದು.
ಮರಣ ಶಾಸನ ಬರೆದ ನಂತರ ಎಷ್ಟು ಕಾಲಾವಕಾಶದೊಳಗೆ ನೋಂದಣಿ ಮಾಡಿಸಬೇಕೆಂಬ ಪ್ರಶ್ನೆ ಮೂಡಬಹುದು. ಆದರೆ, ನೋಂದಣಿ ಮಾಡಿಸಲಿಕ್ಕೆ ಕಾಲದ ಮಿತಿ ಇರುವುದಿಲ್ಲ. ಮರಣ ಶಾಸನ ಮಾಡಿದ ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಯಾವಾಗಲಾದರೂ ರದ್ದುಪಡಿಸಬಹುದು. ರದ್ದುಪಡಿಸಲು ನಿಗದಿತ 100 ರೂ. ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ.
ಮರಣ ಶಾಸನ ನೋಂದಣಿ ಆದ ಮೇಲೆ ಇದಕ್ಕೆ ತಿದ್ದುಪಡಿ ಅನುಬಂಧ ಮಾಡಬಹುದೇ?: ಹೌದು, ಮರಣ ಶಾಸನಕರ್ತನು ಮರಣ ಶಾಸನದ ಯಾವುದೇ ಅಂಶವನ್ನು ತಿದ್ದುಪಡಿ ಮಾಡಲು ಅಪೇಕ್ಷೆ ಪಟ್ಟಲ್ಲಿ ತನ್ನ ಜೀವಿತ ಕಾಲದಲ್ಲಿ ತಿದ್ದುಪಡಿ ಮಾಡಬಹುದು. ಮರಣ ಶಾಸನ ಬರೆದಿಟ್ಟ ವ್ಯಕ್ತಿಯ ಮರಣಾ ನಂತರವು ನೋಂದಣಿ ಮಾಡಿಸಬಹುದು.
ನೋಂದಣಿ ಶುಲ್ಕ ಎಷ್ಟು? : ಮುದ್ರಾಂಕ ಶುಲ್ಕ ಇರುವುದಿಲ್ಲ. ಆದರೆ, ಮರಣ ಶಾಸನ ಬರೆದ ವ್ಯಕ್ತಿಯು ಜೀವಿತ ಕಾಲದಲ್ಲಿ ನೋಂದಾಯಿಸಲಿಕ್ಕೆ 200 ರೂ. ನೋಂದಣಿ ಶುಲ್ಕ ಇರುತ್ತದೆ. ಮರಣಾ ನಂತರ ನೋಂದಾಯಿಸಲಿಕ್ಕೆ 200 ರೂ. ಮತ್ತು ವಿಚಾರಣಾ ಫೀ 250 ರೂ. ಹೆಚ್ಚುವರಿಯಾಗಿ ಪಾವತಿ ಮಾಡಬೇಕು.
ಮರಣ ಶಾಸನ ಪತ್ರ ಬರೆದ ವ್ಯಕ್ತಿ ಬದುಕಿರುವವರೆಗೆ ಅದರ ನಕಲು ಪ್ರತಿ ಪಡೆಯುವ ಹಕ್ಕು ಅವರಿಗೆ ಮಾತ್ರ ಇರುತ್ತದೆ. ಅವರ ಮರಣಾ ನಂತರ ಮರಣ ಹೊಂದಿದ ಬಗ್ಗೆ ಸೂಕ್ತ ದೃಢೀಕೃತ ದಾಖಲೆಗಳನ್ನು ಒದಗಿಸಿ ಯಾರಾದರೂ ಪಡೆಯಬಹುದು.
ಮರಣ ಶಾಸನ ಸೀಲು ಮಾಡಿದ ಲಕೋಟೆಯಲ್ಲಿ ಇಟ್ಟು ಜಿಲ್ಲಾನೋಂದಣಾಧಿಕಾರಿಯವರ ಕಚೇರಿಯಲ್ಲಿ ಠೇವಣಿ ಮಾಡಲು ಒಂದು ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೀಗೆ ಠೇವಣಿ ಮಾಡಿದ ವ್ಯಕ್ತಿ ಅಥವಾ ಅವರಿಂದ ಸೂಕ್ತ ಅಧಿಕಾರ ಪಡೆದ ವ್ಯಕ್ತಿ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. ಠೇವಣಿ ಹಿಂದಕ್ಕೆ ಪಡೆಯಲು 200 ರೂ. ಪಾವತಿ ಮಾಡಬೇಕಾಗುತ್ತದೆ.
ಮರಣ ಶಾಸನವನ್ನು ಬರೆದಿಟ್ಟ ವ್ಯಕ್ತಿಯು ಮೃತಪಟ್ಟ ಬಗ್ಗೆ ದಾಖಲೆ ಒದಗಿಸಿದರೆ ಜಿಲ್ಲಾ ನೋಂದಣಿ ಅಧಿಕಾರಿ ಅವರು ಅರ್ಜಿ ಸಲ್ಲಿಸಿದವರ ಸಮಕ್ಷಮದಲ್ಲಿ ಮೊಹರಾದ ಲಕೋಟೆಯನ್ನು ತೆರೆದು ನೋಂದಣಿ ಮಾಡಿ ಇಚ್ಛಿಸಿದಲ್ಲಿ ಅದರ ನಕಲು ನೀಡುವರು. ಇದನ್ನು ತೆರೆದು ನೋಂದಾಯಿಸಲು 100 ರೂ. ಪಾವತಿಸಬೇಕಾಗುತ್ತದೆ.
ಮರಣ ಶಾಸನ ಪತ್ರದ ಮೂಲಕ ಪಡೆದ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳುವ ಬಗೆ ಹೇಗೆ?: ಮರಣ ಶಾಸನ ಪತ್ರ ಬರೆದ ವ್ಯಕ್ತಿಯ ಮರಣ ನಂತರ ಮರಣ ದೃಢೀಕರಣ ಪತ್ರ ಹಾಗೂ ಅರ್ಜಿಯ ಜೊತೆ ಪ್ರಮಾಣ ಪತ್ರವನ್ನು ಮರಣ ಶಾಸನ ಪತ್ರದಲ್ಲಿ ನಮೂದಿಸಿದ ವ್ಯಕ್ತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಆಸ್ತಿಯ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದಾಗಿದೆ.
ಯಾವ ಪತ್ರಗಳು ನೋಂದಾಯಿಸಬೇಕು: ಸ್ಥಿರ ಆಸ್ತಿಯ ದಾನ ಪತ್ರಗಳು, ಒಂದು ನೂರು ರೂಪಾಯಿಗಳ ಮತ್ತು ಅದರ ಮೇಲ್ಪಟ್ಟ ಮೌಲ್ಯದ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ಹಕ್ಕು ಸ್ವಾಮ್ಯ ಹಾಗೂ ಹಿತಾಸಕ್ತಿಯನ್ನು (Right tittle and interest) ಈಗಾಗಲಿ ಅಥವಾ ಮುಂದಾಗಲಿ ಸೃಜಿಸಲು, ಘೋಷಿಸಲು, ಹಸ್ತಾಂತರಿಸಲು ಪರಿಮಿತಗೊಳಿಸಲು ಅಥವಾ ಅಂತ್ಯಗೊಳಿಸುವಂತೆ ತಕ್ಷಣವೇ ಜಾರಿಯಲ್ಲಿ ಬರುವಂತಹ ದಸ್ತಾವೇಜುಗಳು. ಸ್ಥಿರಾಸ್ತಿಯಲ್ಲಿ ಯಾವುದೇ ಹಕ್ಕು ಸ್ವಾಮ್ಯ ಅಥವಾ ಹಿತಾಸಕ್ತಿಯನ್ನು ಸೃಜಿಸುವ ಘೋಷಿಸುವ ಹಸ್ತಾಂತರಿಸಲು ಪರಿಮಿತಗೊಳಿಸಲು ಅಥವಾ ಅಂತ್ಯಗೊಳಿಸುವಂತ ಕಾರಣದಿಂದಾಗಿ ಯಾವುದೇ ಪ್ರತಿಫಲದ ಸ್ವೀಕಾರ ಅಥವಾ ಸಂದಾಯದ ತಕ್ಷಣವೇ ಜಾರಿಯಲ್ಲಿ ಬರುವಂತಹ ದಸ್ತಾವೇಜುಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ.
ಆಸ್ತಿಗಳ ವಿಭಾಗ ಮಾಡಿಕೊಳ್ಳುವುದು ಹೇಗೆ?: ಸಾಧ್ಯ ಇರುವ ಆಸ್ತಿಗಳನ್ನು ವಿಭಾಗ ಮಾಡಿಕೊಳ್ಳಬಹುದು. ಈ ವಿಭಾಗದಿಂದ ಆಸ್ತಿಯಲ್ಲಿ ಹಕ್ಕುಗಳು ಉತ್ಪನ್ನವಾಗಿ ಇಂತಹ ವಿಭಾಗವನ್ನು ದಸ್ತಾವೇಜಿನ ಮೂಲಕ ಜಾರಿಗೆ ತಂದ ಸಂದರ್ಭದಲ್ಲಿ ಈ ಹಿಸ್ಸಾ ಪತ್ರ (ವಾಟ್ನಿ) / ವಿಭಾಗ ಪತ್ರವನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗುತ್ತದೆ.
ಬಾಯಿ ಮಾತಿನ ಹಿಸ್ಸೆ ( Oral Partition) ಮಾಡಿಕೊಂಡು ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುವಂತಹ ಸಂದರ್ಭದಲ್ಲಿ ಈ ವರದಿಯನ್ನು ನೋಂದಾಯಿಸುವ ಅಗತ್ಯವಿಲ್ಲ. ಈ ಮೇಲೆ ವಿವರಿಸಿದ ಯಾವುದೇ ರೀತಿಯಲ್ಲಿ ಮಾಡಿಕೊಂಡ ಹಿಸ್ಸಾಪತ್ರ (ವಾಟ್ನಿ) / ವಿಭಾಗ ಪತ್ರಕ್ಕೆ ಈ ಪತ್ರ ನೋಂದಾಯಿಸುವಂತಹದಾಗಿರಲಿ ಅಥವಾ ನೋಂದಾಯಿಸದೆ ಇರುವಂತಹದ್ದಾಗಿರಲಿ ಮುದ್ರಾಂಕ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ. ಹಿಸ್ಸೆ ಮಾಡಿಕೊಳ್ಳುವವರು ಪರಸ್ಪರ ಒಪ್ಪಂದದ ಪ್ರಕಾರ ಹಿಸ್ಸೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.