ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಈ ವರ್ಷವಾದರೂ ಆರಂಭವಾಗುತ್ತಾ? ಇಂತಹದೊಂದು ಪ್ರಶ್ನೆ ಪೋಷಕ ವರ್ಗದಲ್ಲಿ ಹಾಗೂ ಶಾಲಾ ಆಡಳಿತ ಮಂಡಳಿಯಲ್ಲಿ ಹಾಗೇ ಉಳಿದಿದೆ.
ಸದ್ಯ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಶುರುವಾಗಿದೆ. ಜು.1 ರಿಂದ ಆನ್ಲೈನ್ ಪಾಠ ಪ್ರವಚನ ನಡೆಯುತ್ತಿದ್ದು, ಹಾಜರಾತಿ ಪ್ರತಿಕ್ರಿಯೆ ಶುರುವಾಗಿದೆ. ಇತ್ತ ಕೊರೊನಾ 2ನೇ ಅಲೆಯ ಇಳಿಕೆ ಬೆನ್ನಲ್ಲೇ ಶಾಲಾರಂಭ ಆಗುತ್ತಾ ಅಂದರೆ ಅಲ್ಲಿ 3ನೇ ಅಲೆಯ ಎಂಟ್ರಿ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಅಪಸ್ವರ ಹಾಡಿದೆ. ಕೊರೊನಾ 3ನೇ ಅಲೆ ಹಿನ್ನೆಲೆ ಕಲಿಕೆ ಮುಂದುವರೆಯಬೇಕು ಅಂದರೆ ಆನ್ಲೈನ್ ಕ್ಲಾಸ್ ಅನಿವಾರ್ಯವಾಗಿದೆ.
ಆನ್ಕ್ಲಾಸ್ ಕಲಿಕೆ ಭೌತಿಕ ತರಗತಿಯಷ್ಟು ಪರಿಣಾಮಕಾರಿ ಇಲ್ಲದೇ ಇದ್ದರೂ, ಸದ್ಯದ ಸ್ಥಿತಿಗತಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಗದಂತೆ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ನಾರಾಯಣ ಇ-ಟೆಕ್ನೋ ಸ್ಕೂಲ್ ಶಿಕ್ಷಕ ಅಶ್ವಥ್ ರಾಜು ವಿವರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಕೊರೊನಾ ನಂತರ ಆನ್ಲೈನ್ ಮುಖಾಂತರ ಶಿಕ್ಷಣ ನಡೆಯುತ್ತಿದೆ. ಹೀಗಾಗಿ, ಮಕ್ಕಳ ಕಲಿಕೆಯ ಗುಣಮಟ್ಟ ಇಳಿಕೆಯಾಗಿದೆ ಎಂದು ಪಾಲಕ - ಪೋಷಕ ಹಾಗೂ ಶಿಕ್ಷಕ ವರ್ಗಕ್ಕೆ ಚಿಂತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಶಿಕ್ಷಣದಲ್ಲಿ ಕಲಿಕಾ ಮಟ್ಟವನ್ನ ಹೆಚ್ಚಿಸಲು ಏನು ಮಾಡಬೇಕು ಎಂಬುದನ್ನ ಗಮನಿಸಬೇಕಿದೆ ಎಂದು ತಿಳಿಸಿದರು.
ತರಗತಿಯಲ್ಲಿ ಪಾಠ ಮಾಡುವಾಗ ಶಿಕ್ಷಕರ ದೃಷ್ಟಿ ವಿದ್ಯಾರ್ಥಿಗಳ ಮೇಲೆ ನೇರವಾಗಿ ಇರುತ್ತಿತ್ತು. ಇಂತಹ ಸಂದರ್ಭದಲ್ಲಿ ಶಿಕ್ಷಕರು ಕಲಿಕಾ ಸಾಮರ್ಥ್ಯದ ಕುರಿತು ಪರೀಕ್ಷೆ ಮಾಡಬಹುದಿತ್ತು. ಆದರೆ, ಆನ್ಲೈನ್ ಕ್ಲಾಸ್ನಲ್ಲಿ ಅದೇ ಮಕ್ಕಳು ಇದ್ದರೂ ಗುಣಮಟ್ಟ ಅಳೆಯಲು ಸಾಧ್ಯವಾಗ್ತಿಲ್ಲ. ಕಾರಣ ಮಕ್ಕಳ ಗಮನ ಹರಿಸುವಿಕೆ ತುಂಬಾ ಕಡಿಮೆಯಾಗುತ್ತಿದೆ.
- ಪೋಷಕರು ಕಲಿಕೆಯ ಅನುಭವ ಹಂಚಿಕೊಳ್ಳಬೇಕು:
ಒಂದು ಸಮಯದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೊಬೈಲ್ಗಳಿಂದ ದೂರ ಇಡಲಾಗುತ್ತಿತ್ತು. ಆದರೆ, ಇದೀಗ ಅದೇ ಮೊಬೈಲ್ಗಳನ್ನ ಪೋಷಕರೇ ಒತ್ತಾಯದಿಂದ ಕೊಡುವಂತಾಗಿದೆ. ಆನ್ ಲೈನ್ ಕ್ಲಾಸ್ ಶುರು ಆದಾಗಿನಿಂದ ಮಕ್ಕಳು ಅತೀ ಹೆಚ್ಚು ಮೊಬೈಲ್, ಕಂಪ್ಯೂಟರ್, ಟ್ಯಾಬ್ ಅಂತಹ ಗೆಜೆಟ್ಸ್ ಬಳಕೆ 6 ಗಂಟೆ ಹೆಚ್ಚಾಗಿದೆ.
ಇದರಿಂದ ಒತ್ತಡಕ್ಕೆ ಸಿಲುಕುವ ಮಕ್ಕಳು, ಮನೆಯಲ್ಲಿ ಕುಟುಂಬ ಸದಸ್ಯರು ಮಕ್ಕಳೊಂದಿಗೆ ಕಾಲ ಕಳೆಯಬೇಕು. ಕಲಿಕೆಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಸಹಾಯವಾಗುತ್ತದೆ. ಹಾಗೇ ಮಕ್ಕಳ ಇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸುವುದರಿಂದ ಮಾನಸಿಕವಾಗಿ ಅವರನ್ನ ಒತ್ತಡದಲ್ಲಿ ಇರದಂತೆ ಮಾಡುತ್ತದೆ ಎಂದು ಅಶ್ವಥ್ ರಾಜು ವಿವರಿಸಿದರು.
- ಸಹಪಾಠಿಗಳೊಂದಿಗೆ ಇರಲಿ ಚರ್ಚೆ:
ಕೋವಿಡ್ ಕಾರಣಕ್ಕೆ ಮಕ್ಕಳು ಹೊರಗೆ ಹೋಗದೇ ಇದ್ದರೂ, ಇತರ ವೇದಿಕೆಗಳ ಮೂಲಕ ಅಂದರೆ Zoom, goolge meet ಹೀಗೆ ಇಂತಹ ವೇದಿಕೆ ಮುಖಾಂತರ ಸಹಪಾಠಿಗಳೊಂದಿಗೆ ಚರ್ಚೆ ಇರಲಿ ಎಂದು ತಿಳಿಸಿದರು. ಪರಿಣಾಮಕಾರಿ ಕಲಿಕೆ ಶೇ.30 ರಷ್ಟು ಸಹಪಾಠಿಗಳೊಂದಿಗೆ ನಡೆಯುತ್ತದೆ. ಹೀಗಾಗಿ, ಪೋಷಕರು ಇದಕ್ಕೆ ಅವಕಾಶ ಮಾಡಿಕೊಡಬೇಕು.
- ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಲು ಬಿಡಬೇಕು:
ಕೊರೊನಾ ಕಾರಣಕ್ಕೆ ಶಾಲೆಗಳು ಇರದ ಕಾರಣದಿಂದಾಗಿ ಮಕ್ಕಳು ಮನೆಯಲ್ಲೇ ಲಾಕ್ ಆಗುವಂತಾಗಿದೆ. ಇದರಿಂದ ಆನ್ಲೈನ್ ಪಾಠಕ್ಕಷ್ಟೇ ಸೀಮಿತವಾಗದೇ ಅವರ ಆಟಕ್ಕೂ ಅವಕಾಶ ಕೊಡಬೇಕು. ನೆರೆಹೊರೆಯ ಮಕ್ಕಳೊಂದಿಗೆ ಕನಿಷ್ಠ ಒಂದೂವರೆ ಗಂಟೆ ಆಟವಾಡಲು ಬಿಡಬೇಕು. ಇದರಿಂದ ಮತ್ತಷ್ಟು ಮಕ್ಕಳ ಮನಸ್ಸು ತಿಳಿಯಾಗಲಿದ್ದು, ಕಲಿಕೆ ಮಾರ್ಗ ಇನ್ನಷ್ಟು ಸುಲಭವಾಗಿ ಇರಲಿದೆ ಎಂದು ಶಿಕ್ಷಕ ಅಶ್ವಥ್ ರಾಜು ತಿಳಿಸಿದರು.