ಬೆಂಗಳೂರು : ಗ್ರಾಮೀಣ ಭಾಗದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ನೀಡುವಂತೆ ಸರ್ಕಾರದ ಶಿಕ್ಷಣ ಸುಧಾರಣೆಯ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದಿನಗಳ 'ಪರಿಹಾರ' ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ನೀರಿನ ಸೌಲಭ್ಯ, ಶೌಚಾಲಯ, ಅಡುಗೆ ಕೋಣೆಗಳಿಗೆ ನೀರಿನ ಸೌಲಭ್ಯ ಹಾಗೂ ನರೇಗಾ ಯೋಜನೆಯ ಅಡಿ ಕಾಂಪೌಂಡ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಖ್ ಪ್ರಾತ್ಯಕ್ಷತೆ ಏರ್ಪಡಿಸಿದ್ದರು.
ಕೇಂದ್ರ ಸರ್ಕಾರದ 100 ದಿನದ ಪರಿಹಾರ ಯೋಜನೆಯು ಏಪ್ರಿಲ್ 7ರಂದು ಅಂತ್ಯವಾಗುತ್ತಿದ್ದು, ಈ ಯೋಜನೆಯನ್ನು ಇನ್ನೂ 1-2 ತಿಂಗಳ ಕಾಲ ವಿಸ್ತರಿಸಬೇಕು. ಹಾಗೇ ಬಾಕಿ ಉಳಿದಿರುವ ಎಲ್ಲಾ ಗ್ರಾಮಾಂತರ ಸರ್ಕಾರಿ ಶಾಲೆಗಳಲ್ಲಿನ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಈಗಾಗಲೇ ಸಚಿವ ಕೆ.ಎಸ್ ಈಶ್ವರಪ್ಪರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪತ್ರ ಮುಖೇನ ವಿನಂತಿಸಿದ್ದಾರೆ.
ಶೈಕ್ಷಣಿಕ ವರ್ಷ ಶುರುವಾಗುವ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ:
ಈಗಾಗಲೇ ಕೋವಿಡ್ ಹಾವಳಿಯಿಂದಾಗಿ ಪೋಷಕರು ಖಾಸಗಿ ಶಾಲೆಗಳ ಶುಲ್ಕ ಪಾವತಿಸಲು ತೊಂದರೆ ಪಡುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಲ್ಲಿರುವಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡಲು ನೀರಿನ ಸೌಕರ್ಯ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಾಂಪೌಂಡ್ ಹಾಗೂ ಇನ್ನಿತರ ವಿದ್ಯಾರ್ಥಿ ಸೌಲಭ್ಯಗಳ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಲಾಗಿದೆ. 2021ನೇ ಶೈಕ್ಷಣಿಕ ಸಾಲಿನ ತರಗತಿಗಳು ಪ್ರಾರಂಭವಾಗುವ ಮುಂಚೆಯೇ ಬಾಕಿ ಇರುವ ಸೌಲಭ್ಯಗಳ ಕಾಮಗಾರಿ ಕೆಲಸವನ್ನು ಆದ್ಯತೆ ಮೇರೆಗೆ ಮುಗಿಸುವಂತೆ ತಿಳಿಸಲಾಗಿದೆ.
ಒಂದು ವೇಳೆ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಸರ್ಕಾರ ನೀಡಿದ್ದಲ್ಲಿ, ಪೋಷಕರುಗಳು ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗಲಿದ್ದಾರೆ. ಜೊತೆಗೆ ಶುಲ್ಕದ ಬಗ್ಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರುಗಳ ಮಧ್ಯೆ ಈಗ ನಡೆಯುತ್ತಿರುವ ಸಂಘರ್ಷ ಕೊನೆಗೊಳ್ಳಲಿದೆ ಎಂದು ಸಲಹೆ ನೀಡಿದ್ದಾರೆ.
ಗ್ರಾಮಾಂತರದಲ್ಲಿರುವ ಸರ್ಕಾರಿ ಶಾಲೆಗಳು ಪಡೆದ ಸೌಲಭ್ಯಗಳು ಏನೇನು?
ರಾಜ್ಯದಲ್ಲಿರುವ ಗ್ರಾಮಾಂತರ ಭಾಗದಲ್ಲಿ 45,673 ಸರ್ಕಾರಿ ಶಾಲೆಗಳು ಇದ್ದು, ಇದರಲ್ಲಿ ಜಲಜೀವನ್ ಮಿಷನ್ (JJM) ಅಡಿಯಲ್ಲಿ ಇದುವರೆಗೂ ಸೌಲಭ್ಯ ಪಡೆದ ಮಾಹಿತಿ ಹೀಗಿದೆ.
ಸೌಲಭ್ಯ ಪಡೆದ ಶಾಲೆಗಳ ಸಂಖ್ಯೆ:
1) ಕುಡಿಯುವ ನೀರಿನ ಸೌಲಭ್ಯ - 13,058 ಶಾಲೆಗಳು
2) ಯೂನಿಟ್ ಶೌಚಾಲಯಗಳಿಗೆ ನೀರಿನ ಸೌಲಭ್ಯ - 16,259 ಶಾಲೆಗಳು
3) ಅಡುಗೆ ಕೋಣೆಗಳಿಗೆ ನೀರಿನ ಸೌಲಭ್ಯ - 14,855 ಶಾಲೆಗಳು
4) ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣ - 5014 ಶಾಲೆಗಳು
ಸೌಲಭ್ಯ ಪಡೆಯಬೇಕಾದ ಶಾಲೆಗಳ ಸಂಖ್ಯೆ:
1) ಕುಡಿಯುವ ನೀರಿನ ಸೌಲಭ್ಯ ಸಿಗದ ಸಂಖ್ಯೆ - 2985 ಶಾಲೆಗಳು
2) ಯೂನಿಟ್ ಶೌಚಾಲಯಗಳಿಗೆ ನೀರಿನ ಸೌಲಭ್ಯ ಸಿಗದ ಸಂಖ್ಯೆ -7864 ಶಾಲೆಗಳು
3) ಅಡುಗೆ ಕೋಣೆಗಳಿಗೆ ನೀರಿನ ಸೌಲಭ್ಯಸಿಗದ ಸಂಖ್ಯೆ - 5155 ಶಾಲೆಗಳು
4)ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣ ಆಗದ ಸಂಖ್ಯೆ - 10,430 ಶಾಲೆಗಳು